ಸಿಎಂ ಯಡಿಯೂರಪ್ಪ ಬದಲಾವಣೆ ಪಕ್ಷಕ್ಕೆ ಭಾರೀ ಹಿನ್ನಡೆಯಾಗಲಿದೆ: ಬಿಜೆಪಿಗೆ ಮಠಾಧೀಶರು, ಕಾಂಗ್ರೆಸ್ ನಾಯಕರ ಎಚ್ಚರಿಕೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಬಗೆಗಿನ ಊಹಾಪೋಹಗಳು ಆಡಳಿತಾರೂಢ ಬಿಜೆಪಿಯಲ್ಲಿನ ಒಂದು ಗುಂಪಿನ ವಿರೋಧಕ್ಕೆ ಕಾರಣವಾಗಿರುವುದರ ನಡುವೆ ಪ್ರಮುಖ ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ಸಹ ಅದಕ್ಕೆ ಪ್ರತಿರೋಧ ತೋರುತ್ತಿದ್ದಾರೆ.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಬಗೆಗಿನ ಊಹಾಪೋಹಗಳು ಆಡಳಿತಾರೂಢ ಬಿಜೆಪಿಯಲ್ಲಿನ ಒಂದು ಗುಂಪಿನ ವಿರೋಧಕ್ಕೆ ಕಾರಣವಾಗಿರುವುದರ ನಡುವೆ ಪ್ರಮುಖ ವೀರಶೈವ-ಲಿಂಗಾಯತ ರಾಜಕೀಯ ಮುಖಂಡರು ಸಹ ಅದಕ್ಕೆ ಪ್ರತಿರೋಧ ತೋರುತ್ತಿದ್ದಾರೆ.

ರಾಜ್ಯದ ಜನಸಂಖ್ಯೆಯ ಶೇಕಡಾ 16ರಷ್ಟಿದೆ ಎಂದು ಅಂದಾಜಿಸಲಾಗಿರುವ ಪ್ರಬಲ ಸಮುದಾಯದ ಹಲವಾರು ಮಂದಿ ನಾಯಕರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುವ ಯಾವುದೇ ಕ್ರಮಗಳ ವಿರುದ್ಧ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯವನ್ನು ಬಿಜೆಪಿಯ ಪ್ರಮುಖ ಶಕ್ತಿಯ ನೆಲೆ ಎಂದು ಪರಿಗಣಿಸಲಾಗಿದೆ.

ಯಡಿಯೂರಪ್ಪ ಅವರ ಬದಲಾವಣೆ ನಿಶ್ಚಿತ ಎನ್ನುವ ಊಹಾಪೋಹದೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಸ್ಥ ಶಾಮನೂರು ಶಿವಶಂಕರಪ್ಪ ಪ್ರಬಲ ವೀರಶೈವ, ಲಿಂಗಾಯತ ಸಮುದಾಯ ಸಿಎಂ ಬೆನ್ನ ಹಿಂದಿದೆ ಎಂದಿದ್ದಾರೆ. "ಅವರು (ಬಿಜೆಪಿ ನಾಯಕತ್ವ) ಇತಿಹಾಸವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು -ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್. ಪಟೇಲ್ ಹಾಗೂ ಎಸ್.ಆರ್. ಬೊಮ್ಮಾಯಿ (ಮಾಜಿ ಸಿಎಂಗಳು) ಅವರೆಲ್ಲಾ ಇಂತಹಾ ಪ್ರಯತ್ನದಲ್ಲಿ ಸೋತು ಹೋಗಿದ್ದಾರೆ" ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಸಮುದಾಯವು ಬಯಸಿದೆ ಎಂದು ಹೇಳಿದ ಅವರು, ಯಡಿಯೂರಪ್ಪ ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. "ಯಡಿಯೂರಪ್ಪ ಇರುವವರೆಗೂ ವೀರಶೈವ ಮಹಾಸಭಾ ಅವರ ಹಿಂದೆ ಇರಲಿದೆ. ಯಡಿಯೂರಪ್ಪ ಅವರಿಗೆ ತೊಂದರೆಯಾದರೆ, ಎಲ್ಲಾ ಕೊನೆಯಾಗಲಿದೆ" ಎಂದು ಅವರು ಹೇಳಿದರು.

ಯಡಿಯೂರಪ್ಪನಂತಹ ಎತ್ತರದ ನಾಯಕನನ್ನು "ಕೆಟ್ಟದಾಗಿ ನಡೆಸಿಕೊಂಡರೆ" ಬಿಜೆಪಿ ಲಿಂಗಾಯತರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಲಿಂಗಾಯತ ಸಮುದಾಯದ ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಎಂ ಬಿ ಪಾಟೀಲ್ ಎಚ್ಚರಿಸಿದ್ದಾರೆ.

"ಬಿಜೆಪಿ ಯಡಿಯೂರಪ್ಪ ಅವರ ಕೊಡುಗೆಯನ್ನು ಗೌರವಿಸಬೇಕು ಮತ್ತು ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಉದ್ದೇಶಿತ ಬದಲಾವಣೆಗಳು ಬಿಜೆಪಿಯ ಆಂತರಿಕ ವಿಷಯಗಳಾಗಿರಬಹುದು ಆದರೆ ಅವರು ಇದನ್ನು ಅರ್ಥಮಾಡಿಕೊಳ್ಳಬೇಕು" ಅವರು ಹೇಳಿದರು.

ಆದಾಗ್ಯೂ, ಯಡಿಯೂರಪ್ಪ ಅವರನ್ನು ಬೆಂಬಲಿಸಿ ಹಿರಿಯ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಅವರ ವೀರಶೈವ-ಲಿಂಗಾಯತ ಬೆಂಬಲವನ್ನು ತಮ್ಮತ್ತ ಸೆಳೆಯುವ ಮೂಲಕ ಸಮುದಾಯದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸುವ ಪ್ರಯತ್ನವಾಗಿ ಕಂಡುಬರುತ್ತದೆ.

ಸಮುದಾಯದ ಹಲವಾರು ಪ್ರಮುಖ ಪೀಠಾಧಿಪತಿಗಳು, ಚಿತ್ರದುರ್ಗ ಮೂಲದ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದ ಮುಖ್ಯಸ್ಥರಾದ ಶಿವಮೂರ್ತಿ ಮುರುಘಾ ಶರಣರು, ಬಾಳೆಹೊನ್ನೂರು ಶ್ರೀ ವೀರ ಸೋಮೇಶ್ವರ ಶಿವಚಾರ್ಯ ಸ್ವಾಮಿ, ಮತ್ತು ಬಾಳೆಹೊನ್ನೂರು ರಂಭಾಪುರಿ ಪೀಠ, ಮತ್ತು ಶ್ರೀಶೈಲ ಜಗದ್ಗುರು ಚೆನ್ನ ಸಿದ್ದರಾಮ ಪಂಡಿತಾರಾದ್ಯ ಯಡಿಯೂರಪ್ಪ ಅವರನ್ನು ಬದಲಿಸುವ ಯಾವುದೇ ಕ್ರಮವು ಬಿಜೆಪಿಗೆ "ದೊಡ್ಡ ಹೊಡೆತವನ್ನು" ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

"ರಾಜಕೀಯದಲ್ಲಿ ಘರ್ಷಣೆ ಸಾಮಾನ್ಯವಾಗಿದೆ, ಯಾರಾದರೂ ಏನನ್ನೂ ಹೇಳಲಿ, ಆದರೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಮತ್ತು ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸವಿದೆ. ಇದರಲ್ಲಿ ಯಾವುದೇ ನ್ಯೂನತೆಯಾದಲ್ಲಿ ಅದು ಪಕ್ಷಕ್ಕೆ ದೊಡ್ಡ ಪರಿಣಾಮಗಳನ್ನು ಬೀರುತ್ತದೆ" ಎಂದು ಅವರು ಹೇಳಿದರು . ಯಡಿಯೂರಪ್ಪ ಅವರು ಈ ವಯಸ್ಸಿನಲ್ಲಿಯೂ ಸಹ ಪ್ರವಾಹ ಮತ್ತು ಕೊರೋನಾ ಸಮಯದಲ್ಲಿ ಅವರ ಸಮರ್ಥ ಕಾರ್ಯಗಳಿಗಾಗಿ ಪಕ್ಷಗಳು ಮತ್ತು ಸಮುದಾಯಗಳ ಜನರ ಬೆಂಬಲವನ್ನು ಹೊಂದಿದ್ದಾರೆ ಎಂದು ಶ್ರೀಗಳು ಹೇಳಿದರು.

"ರಾಷ್ಟ್ರೀಯ ನಾಯಕತ್ವ (ಬಿಜೆಪಿಯ) ಅದನ್ನು (ಸಿಎಂ ಬದಲಾವಣೆ) ಅನುಮತಿಸುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಅವರು ಹೇಳಿದರು. ಮುರುಘಾ ಶರಣರು ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಯಡಿಯೂರಪ್ಪ ಕೂಡ ಇದ್ದಾರೆ, ಮತ್ತು ಅವರು ಒಂದು ಶಕ್ತಿ ಎಂದು ಹೇಳಿದರು. "ಯಡಿಯೂರಪ್ಪ ಹುಟ್ಟಿನಿಂದ ಲಿಂಗಾಯತನಾಗಿರಬಹುದು, ಆದರೆ ಅವರು  ಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯಬಲ್ಲ ಸಾಮೂಹಿಕ ನಾಯಕರಾಗಿದ್ದಾರೆ. ಅವರಂತೆ ಎತ್ತರದ ಲಿಂಗಾಯತ ನಾಯಕರ ಘನತೆಗೆ  ಧಕ್ಕೆ ತರುವಂತಹ ಏನೂ ಆಗಬಾರದು. ಅವರು ತಳಮಟ್ಟದಿಂದ ಬೆಳೆದಿದ್ದಾರೆ ಮತ್ತು ಕೊರೋನಾ ಸಮಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ, ಮತ್ತು ಅವರ ಮುಂದುವರಿಕೆ ಪಕ್ಷದ ವ್ಯಾಪ್ತಿಯಲ್ಲಿ ವಿವಿಧ ಮಠಾಧೀಶರು, ಜನರು, ಸಂಸ್ಥೆಗಳು ಮತ್ತು ರಾಜಕೀಯ ನಾಯಕರ ಆಶಯವಾಗಿದೆ" ಎಂದು ಅವರು ಹೇಳಿದರು.

"ಯಡಿಯೂರಪ್ಪ ಅವರಿಗೆ  ವಯಸ್ಸಾಗಿರಬಹುದು, ಆದರೆ ಅವರು  ಇನ್ನೂ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಂದುವರಿಯಲು ಅವಕಾಶ ನೀಡಬೇಕು" ಎಂದು ಸಿದ್ಧರಾಮ ಪಂಡಿತರಾಧ್ಯ ಹೇಳಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಮಠ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಉದಾರವಾದ ಅನುದಾನವನ್ನು ನೀಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು. ಆ ಮೂಲಕ ಅವರ ವಿಶ್ವಾಸವನ್ನು ಗಳಿಸಿದ್ದರು. ಇತ್ತೀಚೆಗೆ ಅವರ ಬದಲಾವಣೆ ಬಗ್ಗೆ ಊಹಾಪೋಹ  ಹಗಳ ಮಧ್ಯೆ, ಯಡಿಯೂರಪ್ಪ ಅವರ ಕಿರಿಯ ಮಗ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಮುಖ ವೀರಶೈವ-ಲಿಂಗಾಯತ ಶ್ರೀಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು, ಇದು ರಾಜಕೀಯ ವಲಯಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

ಸಿದ್ಧರಾಮ ಪಂಡಿತರಾಧ್ಯ ಸ್ವಾಮೀಜಿ ಮತ್ತು ವೀರ ಸೋಮೇಶ್ವರ ಶಿವಚಾರ್ಯ ಸ್ವಾಮಿ ಇತ್ತೀಚೆಗೆ ಶಿವಮೊಗ್ಗದಲ್ಲಿರುವ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದರು

ಇನ್ನೊಂದೆಡೆ ಅಸಮಾಧಾನದಿಂದ ಕೂಡಿರುವ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ ಬೆಲ್ಲದ್, ಸಿಎಂ ಬದಲಾವಣೆಗಾಗಿ ಇದೀಗ ಸ್ವಲ್ಪ ಸಮಯದಿಂದಲೂ ಪ್ರಯತ್ನದಲ್ಲಿರುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ಸಹ ಇದೇ ಪ್ರಬಲ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com