ಯಾವುದೇ ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸಿದ್ದರಾಮಯ್ಯ

‘ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈಹಾಕಬಾರದು.‌ ಇಲ್ಲಿ ಜನಾಭಿಪ್ರಾಯವೇ ಅಂತಿಮ. ಮಠಾಧೀಶರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಠಗಳ ಬಗ್ಗೆ ಜನರಿಗಿರುವ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ’
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮಂಗಳೂರು: ‘ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈಹಾಕಬಾರದು.‌ ಇಲ್ಲಿ ಜನಾಭಿಪ್ರಾಯವೇ ಅಂತಿಮ. ಮಠಾಧೀಶರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಠಗಳ ಬಗ್ಗೆ ಜನರಿಗಿರುವ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಹಲವು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ರ್ಯಾಲಿ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮ, ಧಾರ್ಮಿಕ ಮುಖಂಡರು ಮತ್ತು ಮಠಾಧೀಶರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇಲ್ಲಿ ಜನಾಭಿಪ್ರಾಯವೇ ಅಂತಿಮ ಎಂದರು. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಮಠಾಧೀಶರು ಯಡಿಯೂರಪ್ಪ ಅವರನ್ನು ಬೆಂಬಲಿಸುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಕ್ಷದ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಯಡಿಯೂರಪ್ಪ ಅವರು 2019 ರ ಪ್ರವಾಹ ಪೀಡಿತರಿಗೆ ಎರಡು ವರ್ಷಗಳಾದರೂ ಇನ್ನೂ ಪರಿಹಾರ ನೀಡಿಲ್ಲ. "ಈಗ ಮತ್ತೆ ಭಾರೀ ಮಳೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಾ ಕಡೆ ಮಳೆ ಬಂದು ಜನ, ಜಾನುವಾರಗಳ ಪ್ರಾಣ ಹಾನಿಯಾಗಿದೆ, ಮನೆಗಳು ಬಿದ್ದಿವೆ. ಇಂತಹ ಸಮಯದಲ್ಲಿ ಸರ್ಕಾರ ಯುದ್ದೋಪಾದಿಯಲ್ಲಿ ಕೆಲಸ ಮಾಡುವ ಬದಲು ಸಿಎಂ ಬದಲಾವಣೆ ಮಾಡುವ ಕೆಲಸದಲ್ಲಿ ಮುಳುಗಿದೆ’ ಎಂದು ಕುಟುಕಿದರು.

ಅವರು ಸಿಎಂ ಆಗಿ ಯಾರನ್ನು ಆಯ್ಕೆ ಮಾಡಿದರೂ, ಬಿಜೆಪಿ ಭ್ರಷ್ಟ ಪಕ್ಷವಾಗಿದ್ದು ಭ್ರಷ್ಟ ಸರ್ಕಾರವನ್ನು ರಚಿಸಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಸರ್ಕಾರವನ್ನು ಕಿತ್ತುಹಾಕಬೇಕು. ಯಡಿಯೂರಪ್ಪನನ್ನು ತೆಗೆದುಹಾಕಲಾಗುವುದು ಎಂದು ನಾನು ಕೆಲವು ತಿಂಗಳ ಹಿಂದೆ ಹೇಳಿದ್ದೆ ಮತ್ತು ಅದು ನಿಜವಾಯಿತು. ಅವರ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ತೆಗೆದುಹಾಕುತ್ತದೆ ಎಂದು ನನಗೆ ವಿಶ್ವಾಸಾರ್ಹ ಮಾಹಿತಿ ಇತ್ತು ಎಂದರು.

ಇಸ್ರೇಲಿ ಸಾಫ್ಟ್ ವೇರ್ ಪೆಗಾಸಸ್ ಬಳಸಿ ದೇಶದಲ್ಲಿ 400 ಮಂದಿಯ ಬೇಹುಗಾರಿಕೆ ನಡೆಸಿದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ಬಿಜೆಪಿಗೆ ಇಂತಹ ಕೊಳಕು ತಂತ್ರಗಳನ್ನು ಬಳಸುವುದು ಗೊತ್ತಿದೆ ಮತ್ತು ಅವರು ತಮ್ಮ ಸರ್ಕಾರವನ್ನು ಉರುಳಿಸಲು ಇದನ್ನು ಮಾಡಿದ್ದಾರೆ ಎಂದರು.

"ನಾನು ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ. ಇದು ಪ್ರಜಾಪ್ರಭುತ್ವದ ಕೊಲೆ. ಎಸ್‌ಸಿ, ಎಚ್‌ಸಿ ನ್ಯಾಯಾಧೀಶರ ಫೋನ್‌ಗಳನ್ನು ಟ್ಯಾಪ್ ಮಾಡುವುದು ವಿಶ್ವಾಸಘಾತುಕತನಕ್ಕೆ ಸಮಾನವಾಗಿದೆ. ಅವರಿಗೆ ಆಡಳಿತ ನಡೆಸಲು ಯಾವುದೇ ನೈತಿಕ ಹಕ್ಕಿಲ್ಲ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com