ಬಸವರಾಜ ಬೊಮ್ಮಾಯಿ ಬಿಜೆಪಿ ಆಯ್ಕೆಯೋ - ಬಿ ಎಸ್ ವೈ ಆಯ್ಕೆಯೋ…?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡಿದ್ದಾರೆ. ಹಿಂದಿನ  ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಒಂದು ರೀತಿಯಲ್ಲಿ ತೆರೆಗೆ ಸರಿದಿದ್ದಾರೆ.
ಯಡಿಯೂರಪ್ಪ - ಬೊಮ್ಮಾಯಿ
ಯಡಿಯೂರಪ್ಪ - ಬೊಮ್ಮಾಯಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡಿದ್ದಾರೆ. ಹಿಂದಿನ  ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಒಂದು ರೀತಿಯಲ್ಲಿ ತೆರೆಗೆ ಸರಿದಿದ್ದಾರೆ.

ಬಸವರಾಜ ಬೊಮ್ಮಾಯಿ ಯಾರ ಆಯ್ಕೆ? ಬಿಜೆಪಿ ಆಯ್ಕೆಯೋ? ಅಥವಾ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೃಪಾಕಟಾಕ್ಷದಿಂದಲೇ ಈ ಹುದ್ದೆ  ಪಡೆದುಕೊಂಡರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಮೇಲು ನೋಟಕ್ಕೆ ಯಡಿಯೂರಪ್ಪನವರಿಂದಲೇ ಬೊಮ್ಮಾಯಿ ಅವರಿಗೆ ಉನ್ನತ ಹುದ್ದೆ ದೊರಕಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬೊಮ್ಮಾಯಿ ಯಡಿಯೂರಪ್ಪನವರಿಗೆ ನಿಕಟವಾಗಿದ್ದರು. ಅವರ ಮಾತುಗಳನ್ನು ಕೇಳುತ್ತಿದ್ದರು. ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಎಲ್ಲ ಕಾರಣದಿಂದ ನೋಡಿದರೆ ಬೊಮ್ಮಾಯಿ ಆಯ್ಕೆ ಹಿಂದೆ ಯಡಿಯೂರಪ್ಪನವರ ನೆರಳಿದೆ, ಆಶೀರ್ವಾದವಿದೆ  ಎಂಬದು ಸದ್ಯದ ಸತ್ಯವೆನಿಸಿದರೂ ರಾಜಕೀಯ ಮುಂದಾಲೋಚನೆ ವಾಸ್ತವಿಕ ನೆಲೆಗಟ್ಟಿನಲ್ಲಿ ಮತ್ತು ಬಿಜೆಪಿ ನಾಯಕರ ರಾಜಕೀಯ  ಲೆಕ್ಕಚಾರದಲ್ಲಿ ನೋಡುವುದಾದರೆ, ಹೇಳುವುದಾದರೆ ಉತ್ತಮ ಆಡಳಿತ ಜೊತೆಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಘನ ಉದ್ದೇಶ, ಗುರಿ, ರಾಜಕೀಯ ಸಂಕಲ್ಪ ಎಲ್ಲವನ್ನು ಸಮಗ್ರವಾಗಿ ನೋಡಿ, ಅಳೆದು, ತೂಗಿ ನಂತರ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟುವ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬುದು ರಾಜಕೀಯ ಪಂಡಿತರ ಸ್ಪಷ್ಟ ಅಭಿಪ್ರಾಯವಾಗಿದೆ.

ಬೊಮ್ಮಾಯಿ ತಮ್ಮ ಚಲನವಲನ, ಆಡಳಿತ, ನಡೆ-ನುಡಿ, ತೀರ್ಮಾನಗಳ ಮೂಲಕವೇ ತಾವು ಬಿಜೆಪಿಯ ಆಯ್ಕೆಯೇ ಹೊರತು, ಯಡಿಯೂರಪ್ಪನವರ ಆಯ್ಕೆ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ. ಅನುಮಾನಗಳಿಗೆ ಆಸ್ಪದವಿಲ್ಲದಂತೆ ಮುಂದಿನ ಹೆಜ್ಜೆ ಹಾಕಬೇಕಿದೆ. 

ಮುಖ್ಯಮಂತ್ರಿ ಹುದ್ದೆಗಾಗಿ ಮಂಡಿಗೆ ತಿನ್ನುತ್ತಿದ್ದವರೆಲ್ಲ ಮತ್ತು ತೆರೆಮರೆಯಲ್ಲಿ ಹಾಗೂ ಬಹಿರಂಗವಾಗಿ ಪ್ರಯತ್ನ ನಡೆಸಿದ್ದ ಆಸೆಪಟ್ಟಿದ್ದ ಉಮೇಶ್ ಕತ್ತಿ, ಅರವಿಂದ ಬೆಲ್ಲದ, ಮುರುಗೇಶ ನಿರಾಣಿ ಇವರೆಲ್ಲರೂ ಜನತಾಪರಿವಾರದಿಂದ ಬಂದವರೇ ಎಂಬುದು ಸ್ಪಷ್ಟ. ಹೀಗಾಗಿ ಬಿಜೆಪಿ ಎಲ್ಲವನ್ನು ಅಳೆದು, ತೂಗಿ ಬಹಳ ಹಿಂದೆಯೇ ಪಟ್ಟಕಟ್ಟುವ ನಿರ್ಧಾರಕ್ಕೆ ಬರಲಾಗಿತ್ತು. ಹೀಗಾಗಿ ಬೊಮ್ಮಾಯಿ ಬಿಜೆಪಿ ಆಯ್ಕೆಯೇ ಹೊರತು, ಯಡಿಯೂರಪ್ಪ ಆಯ್ಕೆ ಅಲ್ಲ ಎಂಬುದು ಸ್ಪಷ್ಟ.

ತಂದೆಯ ಗುಣವಿದೆಯೇ? ಸಮಸ್ಯೆಗಳನ್ನು ಕೇಳುವುದು ಮತ್ತು ಅವುಗಳಿಗೆ ಪರಿಹಾರ ಹುಡುಕುವ ಪ್ರಯತ್ನದಲ್ಲಿ ಅವರ ತಾಳ್ಮೆ ತಂದೆಗಿಂತಲೂ ಒಂದು ಪಟ್ಟು ಹೆಚ್ಚು ಎಂಬುದನ್ನು ತಂದೆ ಮತ್ತು ಮಗನನ್ನು ಚೆನ್ನಾಗಿ ಬಲ್ಲವರು ಹೇಳುವ ಅನುಭವದ ಮಾತು.

ಭ್ರಷ್ಟಾಚಾರದ ಮೂಲಕ ಹಣ ಮಾಡಬೇಕು, ಆ ಮೂಲಕ ಅಧಿಕಾರದಲ್ಲಿ ವಿಜೃಂಭಿಸಬೇಕು ಎಂಬ ಲವಲೇಶದ ಗುಣಗಳು ಸ್ವಲ್ಪವೂ ಇಲ್ಲದಿರುವುದು ಆಡಳಿತಕ್ಕೆ ಹೊಸದಿಕ್ಕು, ಹೊಸ ಸಂಚಲನ ಮೂಡಿಸಬಲ್ಲರು ಎಂಬ ಬಿಜೆಪಿ ನಾಯಕರ ನಂಬಿಕೆ,  ವಿಶ್ವಾಸವೇ, ಅವರನ್ನು ಹುದ್ದೆಗೆ ತಂದು ಕೂರಿಸಲು ಬಹುಮುಖ್ಯ ಕಾರಣ.

ಬಿಎಸ್ ವೈಗೂ ಗೊತ್ತಿತ್ತು: ತಮ್ಮ ನಿರ್ಗಮನದ ನಂತರ ಬಿಜೆಪಿಯ ಕೇಂದ್ರ ನಾಯಕರು ಬಸವರಾಜ ಬೊಮ್ಮಾಯಿ ಅವರನ್ನೇ ಮುಂದಿನ  ಸಾರಥಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬುದು ಯಡಿಯೂರಪ್ಪನವರಿಗೂ ಚೆನ್ನಾಗಿ ಕರತಲಮಯವಾಗಿತ್ತು. ಇದರ ಜೊತೆಗೆ ತಮ್ಮ ನಂತರ ಬೊಮ್ಮಾಯಿ ಅವರೇ ಮುಂದುವರೆಯಬೇಕು ಎಂಬುದೂ ಯಡಿಯೂರಪ್ಪನವರ ಮನಸ್ಸಿನ ಭಾವನೆಗಳ ತುಡಿತವಾಗಿತ್ತು. ಹೀಗಾಗಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ. ಹುದ್ದೆಗಾಗಿ ಯಾವುದೇ ಲಾಬಿ ಮಾಡದ ಬೊಮ್ಮಾಯಿಗೆ ಎಲ್ಲ ಕಡೆಯಿಂದ   ಅದೃಷ್ಟ ಖುಲಾಯಿಸಿದೆ.

ತಂದೆಯಿಂದ ಬಂದಿರುವ ಕೌಟುಂಬಿಕ ಅನುಭವ ಮತ್ತು ಜೆ. ಹೆಚ್ ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿ ಅವರ ಒಡನಾಟದಿಂದ ಕಲಿತಿರುವ ರಾಜಕೀಯ ಪಟ್ಟುಗಳು ಸುಗಮ ಆಡಳಿತ ನಿರ್ವಹಣೆಗೆ ದಾರಿ ಮಾಡಿಕೊಡಲಿವೆ. ಹಿಂದಿನ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಆಡಳಿತಕ್ಕೆ ಹೊಸತನ ನೀಡುವ ಚಾಲಕಿತನವನ್ನು ಬೊಮ್ಮಾಯಿ ಬೆಳೆಸಿಕೊಂಡಿದ್ದಾರೆ. ಹೇಗೆ ಅಳೆದು ತೂಗಿ ನೋಡಿದರೂ ಅವರ ಆಯ್ಕೆ ಇದ್ದದ್ದರಲ್ಲಿ ಉತ್ತಮ ಎಂಬುದರಲ್ಲಿ ಯಾವುದೇ  ಸಂಶಯವಿಲ್ಲ.

ಇನ್ನು ಬಿಜೆಪಿ ನಾಯಕರು ಎಲ್ಲರ ಯೋಗ್ಯತೆಯನ್ನು ನೋಡಿದ್ದಾರೆ ಅಶೋಕ್, ಸದಾನಂದ ಗೌಡ, ಜಗದೀಶ್ ಶೆಟ್ಟರ್. ಅವರಿಗೆಲ್ಲ ಅವಕಾಶ ಕೊಟ್ಟು ನೋಡಿದ ನಂತರವೇ, ಅಂತಿಮವಾಗಿ, ಸಂಘಪರಿವಾರದ ನಿಕಟ ಸಂಪರ್ಕ ಇಲ್ಲದೆ ಇದ್ದರೂ, ಬೊಮ್ಮಾಯಿಗೆ ಮಣೆ ಹಾಕಲಾಗಿದೆ. ದೇವೇಗೌಡರ ಜೊತೆ, ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿ,, ಹೀಗೆ ಎಲ್ಲರೊಂದಿಗೆ ವೈಯಕ್ತಿಕವಾಗಿ ಉತ್ತಮ ಸ್ನೇಹ, ಬಾಂಧವ್ಯ  ಹೊಂದಿದ್ದಾರೆ. ನಾಳೆ ಒಂದು ವೇಳೆ ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಭಾರದೇ  ಹೋದರೂ , ಜನತಾದಳದ ಮೂಲಕವಾದರೂ ಮತ್ತೆ ಅಧಿಕಾರ ಹಿಡಿಯಬಹುದು. ಅದಕ್ಕೂ ಇವರೇ ಹೆಚ್ಚು ಸೂಕ್ತ, ಸಮರ್ಥ ಎಂಬುದು ಕೇಂದ್ರದ ನಾಯಕರಿಗೆ ಮನವರಿಕೆಯಾಗಿದೆ. ದೂರದ ರಾಜಕೀಯ ಲೆಕ್ಕಚಾರವೂ ಇದೆ.

ಸದ್ಯದ ರಾಜಕೀಯ ಬೆಳವಣಿಗೆ ಮತ್ತು ಮುಂದೆ ಆಗಬಹುದಾದ ರಾಜಕೀಯ ಬದಲಾವಣೆಗಳ ಸಮಗ್ರ ಲೆಕ್ಕಾಚಾರ ಇಟ್ಟುಕೊಂಡೇ  ಅವಕಾಶ ಕೊಡಲಾಗಿದೆ. ಇದು ಒಟ್ಟಾರೆ ಬಿಜೆಪಿ ತೆಗೆದುಕೊಂಡ ಸರ್ವಸಮ್ಮತ ನಿರ್ಧಾರವೇ ಹೊರತು, ಯಾವುದೇ ವ್ಯಕ್ತಿಯ, ವೈಯಕ್ತಿಕ ಹಿತಾಸಕ್ತಿಯ  ಕಾರಣಗಳ ಹಿನ್ನೆಲೆಯಲ್ಲಿ ಅವರ ಆಯ್ಕೆ ನಡೆದಿಲ್ಲ ಎಂಬದು ಸ್ಪಷ್ಟ.

ಕೊನೆಯದಾಗಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಅಟಾಟೋಪಗಳನ್ನು ಕೆಲದಿನಗಳ ಮಟ್ಟಿಗೆಸಹಿಸಿಕೊಳ್ಳಬಹುದು. ಆದರೆ ಬಹಳ ಕಾಲ  ನಡೆಯುವುದಿಲ್ಲ ಎಂಬುದನ್ನು ಅವರು ಜಾಣ್ಮೆ, ಚತುರ ಆಡಳಿತದ ಮೂಲಕ ತೋರಿಸಿಕೊಡಬೇಕು.

ಬಿಜೆಪಿ ಮತ್ತು ನಾಯಕರ ವಿಶ್ವಾಸ, ಒಲವು ಗಳಿಸುವುದೇ ಅವರ ಪರಮ ಗುರಿಯಾದರೆ, ದಿಟ್ಟ ಹೆಜ್ಜೆಯಾದರೆ, ರಾಜಕೀಯ, ಮತ್ತು  ಆಡಳಿತಾತ್ಮಕವಾಗಿಯೂ ಮೇರು ನಾಯಕ ಎಂಬ ಕೀರ್ತಿಗೂ ಭಾಜನರಾಗಬಹುದು. ಜೊತೆಗೆ ಮತ್ತೊಂದು ಅವಧಿಗೂ ಉನ್ನತ ಹುದ್ದೆ ಅಲಂಕರಿಸಲು ಅದೇ ಸೋಪಾನವಾಗಲೂಬಹುದು. ಇದೇ ಅವರ ರಾಜಕೀಯದ ಎಚ್ಚರಿಕೆಯ ಹಾದಿಯಾಬೇಕು.

ಕಲ್ಲು -ಮುಳ್ಳುಗಳ ಹಾದಿಯನ್ನು ಯಶಸ್ವಿಯಾಗಿ ದಾಟುತ್ತಾರೆ ಎಂಬ ನಂಬಿಕೆಯನ್ನು ಉಳಿಸಿಕೊಳ್ಳುವುದರ ಮೇಲೆ ಅವರ ಘನತೆ ಮತ್ತು ಬಿಜೆಪಿ ಸರ್ಕಾರದ ಘನತೆ- ಗೌರವ ಉಳಿಯಲಿದೆ ಹೀಗಾಗಿ ಆಡಳಿತದ ಪ್ರತಿಯೊಂದು ಹೆಜ್ಜೆಯೂ ಪರೀಕ್ಷೆಗೆ ಒಳಪಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com