ಅಂತಃಪುರದ ಸುದ್ದಿಗಳು: ನಾಯಕತ್ವದ ಬದಲಾವಣೆ- ಹೈಕಮಾಂಡ್ ಬಯಸಿದ್ದು..., ಯಡಿಯೂರಪ್ಪ ಹೇಳಿದ್ದು...

-ಸ್ವಾತಿ ಚಂದ್ರಶೇಖರ್ಯಾರು ಏನೇ ಹೇಳಲಿ ಕೊನೆಯ ಕ್ಷಣದ ಅಚ್ಚರಿಯ ನಿರ್ಧಾರಗಳಿಗೆ ಕೈಹಾಕುವುದು ಮೋದಿ-ಅಮಿತ್ ಶಾ ಅವರ ರಾಜಕೀಯ ಕಾರ್ಯತಂತ್ರದ ವೈಖರಿ.
ಅಮಿತ್ ಶಾ-ಮೋದಿ, ಯಡಿಯೂರಪ್ಪ
ಅಮಿತ್ ಶಾ-ಮೋದಿ, ಯಡಿಯೂರಪ್ಪ

ಯಾರು ಏನೇ ಹೇಳಲಿ ಕೊನೆಯ ಕ್ಷಣದ ಅಚ್ಚರಿಯ ನಿರ್ಧಾರಗಳಿಗೆ ಕೈಹಾಕುವುದು ಮೋದಿ-ಅಮಿತ್ ಶಾ ಅವರ ರಾಜಕೀಯ ಕಾರ್ಯತಂತ್ರದ ವೈಖರಿ.

ಕರ್ನಾಟಕದ ಮುಖ್ಯಮಂತ್ರಿಯ ಬದಲಾವಣೆಯ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ಕೊನೆಯವರೆಗೂ ಗುಟ್ಟು ಬಿಟ್ಟುಕೊಡದೇ ಕೆಲಸ ಮಾಡಿದೆ. ಇವೆಲ್ಲದರ ನಡುವೆ ಕುತೂಹಲ ಮೂಡಿಸಿದ್ದು ಮಾತ್ರ ಯಡಿಯೂರಪ್ಪನವರ ತಾಳ್ಮೆ. ರಾಜೀನಾಮೆ ಘೋಷಣೆ ವೇಳೆ ಗದ್ಗದಿತರಾದರೂ ಅಂತಿಮ ಕ್ಷಣದವರೆಗೂ ಅವರು ಬಿಟ್ಟುಕೊಡದ ಸುಳಿವುಗಳು ಹಲವು.

ರಾಜೀನಾಮೆ ಕೊಡಲು ಎರಡು ತಿಂಗಳ ಮುಂಚೆಯೇ ಸಿದ್ಧವಾಗಿದ್ದ ಸಿಎಂ, ಕೊನೆ ಕ್ಷಣದಲ್ಲಿ ಪಕ್ಷದ ವಿರುದ್ಧ ಮುನಿಸು

ಪ್ರಧಾನಿ-ಯಡಿಯೂರಪ್ಪ ಭೇಟಿ ವೇಳೆ ರಾಜೀನಾಮೆ ವಿಷಯ ಸೂಕ್ಷ್ಮವಾಗಿ ಪ್ರಸ್ತಾಪವಾಗಿತ್ತಾದರೂ ನೇರವಾಗಿ ರಾಜೀನಾಮೆ ನೀಡಿ ಎಂದು ಹೇಳಿರಲಿಲ್ಲ. ಉಳಿದಂತೆ ರಾಜ್ಯದ ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡಿದ್ದರು ಹೀಗಾಗಿ ಯಡಿಯೂರಪ್ಪನವರಿಗೆ ತಕ್ಷಣಕ್ಕೆ ಸ್ಪಷ್ಟ ಚಿತ್ರಣ ಸಿಗಲಿಲ್ಲ.

ಆದರೆ ಜಿಂದಾಲ್ ವಿಚಾರವಾಗಿ ದೆಹಲಿಗೆ ವಿಜಯೇಂದ್ರ ಮತ್ತು ಬೊಮ್ಮಾಯಿ ವಿಶೇಷ ವಿಮಾನ ಹತ್ತಿ ಬಂದಾಗಲೇ ರಾಜೀನಾಮೆಯ ಸಂದೇಶವನ್ನು ಬಿಎಸ್ ವೈಗೆ ಸೂಕ್ಷ್ಮವಾಗಿ ತಿಳಿಸಲಾಗಿತ್ತು. ಆಗಲೇ ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದೀನಿ ಎಂಬ ಸಂದೇಶವನ್ನು ಪುತ್ರನ ಮೂಲಕ ರವಾನಿಸಿದ್ದರು ಬಿಎಸ್ ವೈ. ಆದರೆ ಕಳೆದ ಎರಡು ತಿಂಗಳಲ್ಲಿ ವಲಸಿಗರ ದಂಡು ದೆಹಲಿಯಲ್ಲಿ ಬೀಡು ಬಿಟ್ಟಿದ್ದು "ಅವರು ಬಿಎಸ್ ವೈ ವಿರುದ್ಧ ಮಾತಾಡಿ ಸಿಎಂ ಸ್ಥಾನದಿಂದ ಇಳಿಯುವ ಹಾಗೆ ಮಾಡಿದರು" ಎಂಬ ಗುಲ್ಲು ಎದಿದ್ದು ಯಡಿಯೂರಪ್ಪನವರ ಸಿಟ್ಟಿಗೆ ಕಾರಣವಾಯಿತು.

ಜೊತೆಗೇ ಇದ್ದರೂ ಸುಳಿವು ಬಿಟ್ಟು ಕೊಡಲಿಲ್ಲಾ ಸಿಎಂ ಬೊಮ್ಮಾಯಿ

ಬಿಎಸ್ ವೈ ರಾಜೀನಾಮೆ ಸಂದೇಶ ಸ್ಪಷ್ಟವಾಗುತ್ತಿದ್ದಂತೆಯೇ ಕಳೆದ ಒಂದು ವಾರದಿಂದ ಬೊಮ್ಮಾಯಿ ತಮ್ಮ ಆಪ್ತ ಲಿಂಗಾಯಿತ ಸಚಿವರು, ಡಿಸಿಎಂ ಜೊತೆ ಹೆಚ್ಚು ಮಾತಾಡುತ್ತಿದ್ದರು. ಆಗಾಗ ಔತಣ ಕೂಟದಲ್ಲೂ ಭಾಗಿ ಆಗುತ್ತಿದ್ದರು. ಆದರೆ "ಬಿಎಸ್ ವೈ ನನ್ನ ಹೆಸರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದಾರೆ" ಎಂಬ ಸಣ್ಣ ಸುಳಿವನ್ನೂ ಅವರು ಎಲ್ಲೂ ಬಿಟ್ಟು ಕೊಡಲಿಲ್ಲ. ಹೆಸರು ಖಚಿತ ಆಗುತ್ತಿದ್ದ ಹಾಗೆ ಬೊಮ್ಮಾಯಿಯವರ ಆಪ್ತ ಸಚಿವರು ಒಂದು ಕ್ಷಣ ದಿಗ್ಭ್ರಮೆಗೊಳಗಾಗಿದ್ದು ಸುಳ್ಳಲ್ಲ.

ನಿರಾಣಿಗೆ ಸಿಎಂ ಸ್ಥಾನ ತಪ್ಪಿದ್ದು ಏಕೆ?-ಕರ್ನಾಟಕದ ನಿತಿನ್ ಪಟೇಲ್ ಆದರಾ ನಿರಾಣಿ?

ಗೌಪ್ಯತೆ ಹಾಳುಗೆಡವುದು, ಸುಳಿವು ನೀಡುವ ನಡೆ, ಅನಗತ್ಯ ಹೇಳಿಕೆಗಳು ಇದ್ಯಾವುದನ್ನೂ ಬಿಜೆಪಿ ಹೈಕಮಾಂಡ್ ಸಹಿಸುವುದಿಲ್ಲ. ಇಂಥಹ ಯಾವುದೇ ನಡೆ ಕಂಡುಬಂದರೂ ಪರಿಸ್ಥಿತಿ ಏನೇ ಇರಲಿ. ಕೆಲವೇ ನಿಮಿಷಗಳಲ್ಲಿ ನಿರ್ಧಾರಗಳನ್ನು ಬುಡಮೆಲು ಮಾಡುವುದು ಮೋದಿ- ಅಮಿತ್ ಶಾ ರೀತಿ. 2016 ರಲ್ಲಿ ಗುಜರಾತ್ ನ ಸಿಎಂ ಆಯ್ಕೆ ಪ್ರಕ್ರಿಯೆ ಇದಕ್ಕೆ ಉದಾಹರಣೆ.

2016 ರಲ್ಲಿ  ಗುಜರಾತ್ ನ ಆನಂದಿಬೆನ್ ಪಟೇಲ್ ಅಧಿಕಾರದಿಂದ ನಿರ್ಗಮಿಸಿದಾಗ ಅವರ ಉತ್ತರಾಧಿಕಾರಿಯಾಗಿ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ನಿತಿನ್ ಪಟೇಲ್ ಆಯ್ಕೆ ಬಹುತೇಕ ನಿಚ್ಚಳವಾಗಿತ್ತು. ಅಮಿತ್ ಶಾ ಗೆ ಈ ಆಯ್ಕೆ ಅಂದು ಸರಿ ಬಂದಿರಲಿಲ್ಲವಾದರೂ ನಿತಿನ್ ಪಟೇಲ್ ಅಧಿಕೃತ ಘೋಷಣೆಗೂ ಮುನ್ನವೇ, ಅಭಿನಂದನೆಗಳನ್ನು ಸ್ವೀಕರಿಸುವುದು, ತಮ್ಮ ಮುಂದಿನ ಸವಾಲುಗಳ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿ ತಾವೇ ಸಿಎಂ ಎಂಬಂತಹ ಸಂಕೇತಗಳನ್ನು ಹೊರಹಾಕಿದ್ದರು. ಪರಿಣಾಮ ಸಿಎಂ ಪೈಪೋಟಿಯಿಂದ ನಿಂದ ಸಂಪೂರ್ಣ ಹಿಂದೆ ಸರಿದಿದ್ದ ವಿಜಯ್ ರುಪಾನಿ ಕೊನೆಯ 40 ನಿಮಿಷಗಳಲ್ಲಿ ಅಚ್ಚರಿಯ ರೀತಿಯಲ್ಲಿ ಸಿಎಂ ಆಗಿ ಆಯ್ಕೆಯಾದರು. ಸಿಎಂ ಆಗಿಯೇಬಿಟ್ಟಿದ್ದೇನೆ ಎಂಬಂತೆ ವರ್ತಿಸುತ್ತಿದ್ದ ನಿತಿನ್ ಪಟೆಲ್ ಡಿಸಿಎಂ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಸಾರಾಂಶ ಇಷ್ಟೆ. ದೊಡ್ಡ ನಿರ್ಧಾರಗಳಾಗುವಾಗ ಆಕಾಂಕ್ಷಿಗಳ ಅತಿಯಾದ ವೇಗಕ್ಕೆ ಹೈಕಮಾಂಡ್ ತಡೆ ಹಾಕದೇ ಬಿಡುವುದಿಲ್ಲ.

ಸಿಎಂ ರಾಜೀನಾಮೆ ಊಹಾಪೋಹಗಳು ಹರಿದಾಡುತ್ತಿದ್ದಾಗ  ಮೇಲಿಂದ ಮೇಲೆ ದಿಲ್ಲಿ ದಂಡಯಾತ್ರೆ, ವಾರಾಣಸಿಗೆ ಹೋಗಿ ಪೂಜೆ ಸಲ್ಲಿಸಿದ್ದ ಮುರುಗೇಶ್ ನಿರಾಣಿ ಸಹ ಕರ್ನಾಟಕದ ನಿತಿನ್ ಪಟೇಲ್ ಆದ್ರಾ? ಎಂಬ ಮಾತುಗಳು ದಿಲ್ಲಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.  

ಕಳೆದ 6 ತಿಂಗಳ ಹಿಂದೆ ಸಚಿವ ಸ್ಥಾನ ಪಡೆದ ಮುರುಗೇಶ್ ನಿರಾಣಿ ಪಂಚಮಸಾಲಿ ನಾಯಕರ ಸಾಲಿನಲ್ಲಿ ತಮ್ಮ ಪ್ರಭಾವ ಎಷ್ಟಿದೆ ಎಂಬುದನ್ನು ಪ್ರತಿ ಬಾರಿ ದೆಹಲಿಯ ನಾಯಕರಿಗೆ ಮನವರಿಕೆ ಮಾಡುವ ಯತ್ನಿಸಿದರು. ಸಿಎಂ ರಾಜೀನಾಮೆ ಕೊಡುವ ಹಿಂದಿನ ದಿನವೂ ದೆಹಲಿಗೆ ಆಗಮಿಸಿದ ನಿರಾಣಿ ಅವರಿಗೆ ಬೆಂಗಳೂರಿಗೆ ವಪಸ್ಸಾಗಿ 2 ವರ್ಷದ ಸಾಧನ ಸಮಾವೇಶದಲ್ಲಿ ಭಾಗಿಯಾಗಲು ಸೂಚಿಸಲಾಗಿತ್ತು.

ಒಂದು ಹಂತದಲ್ಲಿ ಹೈಕಮಾಂಡ್ ಅಥವಾ ಸ್ವತಃ ಅಮಿತ್ ಶಾ ಮುರುಗೇಶ್ ನಿರಾಣಿಯವರ ಹೆಸರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸುವವರಿದ್ದರೇನೋ ಆದರೆ ಹೈಕಮಾಂಡ್ ನ್ನು ಭೇಟಿ ಮಾಡಿಯೇ ತೆರಳುತ್ತೇನೆ ಎಂದು ಪಟ್ಟು ಹಿಡಿದಿದ್ದ ನಿರಾಣಿಯವರಿಗೆ ಈಗ ಇತ್ತ ಹೈಕಮಾಂಡ್ ಕೂಡ ಇಲ್ಲ, ಸಿಎಂ ಕಮಾಂಡ್ ಕೂಡ ಇಲ್ಲ. ಕೊನೆಗಳಿಗೆಯಲ್ಲಿ ಅತಿಯಾದ ವೇಗ, ತಪ್ಪು ನಡೆಯಿಂದ ಸಿಎಂ ಸ್ಥಾನದ ರೇಸ್ ನಿಂದ ಹೊರಬಿದ್ದರು. You must be politically Right,
Political maturity Is must ಸದ್ಯಕ್ಕೆ ನಿರಾಣಿಗೆ ಈ ಮಾತನ್ನು ದಿಲ್ಲಿಯಲ್ಲಿ ಹೇಳಲಾಗುತ್ತಿದೆ. by the way ಅತಿ ವೇಗಕ್ಕೆ ಕಡಿವಾಣ ಹಾಕಿಕೊಂಡಿದ್ದರೆ, ಇಂದು "ಮುರುಗೇಶ್ ನಿರಾಣಿ ಎಂಬ ನಾನು...." ಎಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದರು.

"ಲಕ್ಷ್ಮಣ ಸವದಿ ಸಿಎಂ"-ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಆದರೆ ಸಿಎಂ ಆಗಲು ಸವದಿಗೆ ಮತ್ತಷ್ಟು ಪೊಲಿಟಿಕಲ್ ಮ್ಯಾನೇಜ್ಮೆಂಟ್ ತಿಳಿದಿರಬೇಕು

ಉತ್ತರ ಕರ್ನಾಟಕದ ದಲ್ಲಿ ಪಂಚಮ ಸಾಲಿಗಳ ನಂತರ ಅತಿ ದೊಡ್ಡ ಸಮುದಾಯ ಎಂದರೆ ಅದು ಗಾಣಿಗ ಸಮುದಾಯ. ಗಾಣಿಗ ಸಮುದಾಯಕ್ಕೆ ಸೇರಿದ ಸವದಿ ಡಿಸಿಎಂ ಆಗಿದ್ದೇ ಹೈಕಮಾಂಡ್ ನ ಒತ್ತಾಸೆಯ ಮೇರೆಗೆ. ಸವದಿ ಕೂಡಾ ಮುಖ್ಯಮಂತ್ರಿ ಪೈಪೋಟಿಯಲ್ಲಿ ಇದ್ದದ್ದು ಸತ್ಯ. ಆದರೆ, ಬಿಎಸ್ ವೈ ಬಣ ಮತ್ತು ವಲಸಿಗರು ಅವರ ಹೆಸರನ್ನು ಒಪ್ಪುವ ಪ್ರಶ್ನೆಯೇ ಇರಲಿಲ್ಲ. ಸೋತವರನ್ನು ಡಿಸಿಎಂ ಮಾಡಿದಕ್ಕೆ ಇದ್ದ ವಿರೋಧದ ಬಗ್ಗೆ ಹೈಕಮಾಂಡ್ ಗೂ ಅರಿವಿತ್ತು. ಇನ್ನು ಸಿಎಂ ಪಟ್ಟಕ್ಕೆ ಬಂದಾಗ ಮತ್ತಷ್ಟು ಪೊಲಿಟಿಕಲ್ ಮ್ಯಾನೇಜ್ಮೆಂಟ್ ತಿಳಿದಿರಬೇಕು ಎಂಬುದು ಪಕ್ಷ-ಸಂಘದ ನಿಲುವು.

"ಬೆಲ್ಲದ" ಪಾಕ ರುಚಿಸಲಿಲ್ಲವ? ಅಥವಾ ದೆಹಲಿಯಲ್ಲಿ "ಜೋಶ್" ಸಾಲಲಿಲ್ಲವ?
 
ಸಂಸದರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿ ಮತ್ತೆ ಚುನಾವಣೆ ಮಾಡುವ ಪ್ರಕ್ರಿಯೆ ಬೇಡ. ಇರುವ 21 ತಿಂಗಳನ್ನು ಶಾಸಕರಿಗೆ ನೀಡುವುದು ಉತ್ತಮ ಎಂದು ಒಂದು ವಾರದ ಮುಂಚೆಯೇ ಸಂಘ ಬಿಜೆಪಿಗೆ ಸ್ಪಷ್ಟಪಡಿಸಿತ್ತು. ಇದರ ಅರ್ಥ 4 ದಿನಗಳ  ಮುಂಚೆಯೇ ಜೋಷಿ ಅವರ ಹೆಸರು ಪಟ್ಟಿಯಿಂದ ಹೊರಬಿದ್ದಿತ್ತು.

ಮಹಾರಾಷ್ಟ್ರ ಮಾದರಿಯಲ್ಲಿ ಫಡ್ನವೀಸ್ ರನ್ನು ತಂದ ಹಾಗೆ ಕರ್ನಾಟಕದಲ್ಲಿ ಬೆಲ್ಲದ್ ಯಾಕೆ ಆಗಬಾರದು ಎಂಬ ಚರ್ಚೆ ಇತ್ತು. ಅದು ಈ ಬಾರಿ ಆಗುವುದಿಲ್ಲ ಎಂಬ ಅರಿವಿದ್ದರೂ ಅವರ ಹೆಸರು ತೇಲಿ ಬಿಟ್ಟರೆ ಪಕ್ಷ ಮತ್ತು ನಾಯಕರು ಹೇಗೆ ವರ್ತಿಸಬಹುದು, ಪ್ರತಿಕ್ರಿಯೆ ಏನಿರುತ್ತೆ ಎಂದು ನೋಡುವ ತಂತ್ರದ ಪ್ರತಿಫಲವೇ ಈ ಹೆಸರು!!

ಇದ್ದ 5-6 ಕಾಂಬಿನೇಷನ್ ಪೈಕಿ ಸದ್ಯ ಡೋಲಾಯಮನವಾದ ಸರ್ಕಾರಕ್ಕೆ ಸ್ಥಿರತೆ ಸಾಧ್ಯವಿದ್ದಿದ್ದು ಬೊಮ್ಮಾಯಿಯಿಂದ ಮಾತ್ರ.

  • ಸಿಎಂಗೂ  ಸಲ್ಲುವರು;
  • ವಲಸಿಗರೂ ಒಪ್ಪುವರು,
  • ಲಿಂಗಾಯತರೂ ಉಳಿಯುವರು
  • ಶಾಸಕರೂ ಮರು ಪ್ರಶ್ನೆ ಎತ್ತರು

ಈ ನಿಟ್ಟಿನಲ್ಲಿ ಗದ್ದುಗೆ ಯಾರಿಗೆ ಎಂಬುದು 26 ರಂದೇ ಬಹುತೇಕ ನಿಶ್ಚಯವಾಗಿತ್ತು ಬಿಎಸ್ವೈ ಪದತ್ಯಾಗ ಮಾಡಿದ ನಂತರ ಕೊನೆ ಮೀಟಿಂಗ್ ನಡೆಸಿದ ದೆಹಲಿ ನಾಯಕರು, ಲಿಂಗಾಯತರನ್ನು, ಅದರಲ್ಲಿಯೂ ಎಲ್ಲರನ್ನೂ ಸರಿದೂಗಿಸಬಲ್ಲ "ಪೊಲಿಟಿಕಲ್ ಮ್ಯಾನೇಜರ್ ನ್ನು ಸಿಎಂ ಮಾಡಬೇಕು" ಎಂದು ಕೊನೆ ಕ್ಷಣದ್ಲಲಿ ನಿಶ್ಚಯಿಸಿದ್ದರು. ಅದರ ಪ್ರಕಾರ ಬೊಮ್ಮಾಯಿ ಹೆಸರು ಅಂತಿಮವಾಗಿತ್ತು. 27 ರಂದು ಶಾಸಕರ ಸಭೆಯಲ್ಲಿ ಪ್ರಸ್ತಾಪಿಸುವುದೊಂದೆ ಬಾಕಿ ಇತ್ತು.

ಜನತಾದಳದಿಂದ ಬಂದ ನಾನು ಮುಖ್ಯಮಂತ್ರಿ ಆಗಲು ಸಾಧ್ಯನ? ಎನ್ನುತ್ತಲೇ ಗುಟ್ಟು ಬಿಟ್ಟುಕೊಡದೇ ಸಿಎಂ ಆದ ಬೊಮ್ಮಾಯಿ

ಜನತಾದಳದಿಂದ ಬಂದ ನಾನು ಮುಖ್ಯಮಂತ್ರಿ ಆಗಲು ಸಾಧ್ಯನ? ಎಂದು ಹೇಳುತ್ತಲೇ ಬೊಮ್ಮಾಯಿ ಮುಖ್ಯಮಂತ್ರಿ ಆದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಪುತ್ರರಾಗಿಯೂ, ರಾಜಕೀಯವನ್ನು ಬಹಳ ಹತ್ರದಿಂದ ನೋಡಿದ ಬೊಮ್ಮಾಯಿ ಅವರಿಗೆ ರಾಜ್ಯ ರಾಜಕೀಯ, ನಾಯಕರು, ಪಕ್ಷಗಳು ಹೊಸದಲ್ಲ, ಆದರೆ ಮೂಲ ಬಿಜೆಪಿಗರು ಅಲ್ಲ ಎಂಬ ಕಾರಣಕ್ಕೆ ಅವರನ್ನು ಪಕ್ಷ ಒಪ್ಪುವುದಿಲ್ಲವೇನೋ ಎಂಬ ಅಳುಕಿತ್ತು. ಇದರ ಮಧ್ಯೆ ಸಿಎಂ ಹೆಸರು ಘೋಷಣೆಯಾಗುವ ದಿನ ಮುಂಜಾನೆಯ ಉಪಹಾರದಲ್ಲಿ ಬಿಎಸ್ ವೈ ಮನಸ್ಸು ಕೊನೆ ಕ್ಷಣದಲ್ಲಿ ನಿರಾಣಿ ಕಡೆಗೂ ವಾಲಿತ್ತು. but Politics is art of possiblities!!

"ಸಂತೋಷ" ಕದಡಿದ ಸುಳ್ಳು ಸುದ್ದಿಗಳ ಹಾವಳಿ

ಮಾಧ್ಯಮಗಳಲ್ಲಿ ಯಡಿಯೂರಪ್ಪನವರ ನಾಯಕತ್ವದ ಬದಲಾವಣೆ ವಿಷಯ ಬಂದಾಗಲೆಲ್ಲಾ ಅಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಸುದ್ದಿಯೂ ತಳುಕು ಹಾಕಿಕೊಂಡಿರುತ್ತದೆ. ಈ ಬಾರಿಯೂ ಸುಳ್ಳು ಸುದ್ದಿಗಳಿಂದ ದೂರ ಉಳಿಯಲು ಆಗಲಿಲ್ಲ.  

ಸಂಘಟನೆ ಸಭೆಗೆ ಕಾಶ್ಮೀರಕ್ಕೆ ತೆರಳಿದ ಬಿಎಲ್ ಸಂತೋಷ್ ರನ್ನು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಭೇಟಿ ಮಾಡಿದ್ದಾರೆ ಎಂಬ ಗುಲ್ಲು ಎಬ್ಬಿಸಿದ್ದ ಸುಳ್ಳು ವರದಿಗಳು ಅವರಿಗೆ ಇರುಸು ಮುರುಸು ಉಂಟು ಮಾಡಿತ್ತು. ಅಲ್ಲದೆ ದೆಹಲಿಯಲ್ಲೇ ಇದ್ದವರನ್ನು ಬೆಂಗಳೂರಿಗೆ ಕರೆಸಿ ಮುಖ್ಯಮಂತ್ರಿ ಮಾಡಿದ ಕೀರ್ತಿಯು ಕೆಲವು ಫೇಕ್ ಸುದ್ದಿಗಳನ್ನು ಹರಿಯಬಿಟ್ಟವರಿಗೆ ಸಲ್ಲುತ್ತೆ.

ಬೊಮ್ಮಾಯಿ ಎಂಬ ನಾನು...!
ಚಿಕ್ಕ ವಯಸ್ಸಿನಿಂದ ರಾಜಯಕೀಯವನ್ನು ಬಹಳ ಹತ್ರದಿಂದ ನೋಡಿದ ಬೊಮ್ಮಾಯಿ ಅವರಿಗೆ ತಂದೆ ಎಸ್ ಆರ್ ಬೊಮ್ಮಾಯಿ ಅವರೆ ಮೊದಲ ರಾಜಕೀಯ ಗುರುಗಳು. "ಬಿಡುವಿನ ಸಮಯವನ್ನು ವ್ಯರ್ಥ ಮಾಡಬೇಡ, ಮನೆಯಲ್ಲಿ ಇರುವ ಎಲ್ಲಾ ಕಾನೂನು ಪುಸ್ತಕಗಳನ್ನು ಓದು" ಎಂದು ತಂದೆ ಹೇಳುತ್ತಿದ್ದರಂತೆ. ಅವತ್ತು ಹಾಕಿದ ಆ ರಾಜಕೀಯ, ಕಾನೂನು, ಜಾಣ್ಮೆಯ ಬುನಾದಿ ಇಂದು ಫಲ ನೀಡಿದೆ.

ಇನ್ನು ಎಲ್ಲಾ ಪಕ್ಷಗಳ ನಾಯಕರೂ ಬೊಮ್ಮಾಯಿ ಅವರನ್ನು ತುಂಬಾ ಗೌರವದಿಂದ ಕಾಣುವುದು ಬಿಜೆಪಿಗೆ blessing in disguise. ಅಂದು ಕಲಿತ ಎಲ್ಲಾ ರಾಜಕೀಯ ಪಾಠಗಳನ್ನು ಬೊಮ್ಮಾಯಿ ಇನ್ನು ಮುಂದಿನ 22 ತಿಂಗಳು ಹೇಗೆ ಪ್ರಯೋಗಿಸಲಿದ್ದಾರೆ ಎಂಬ ಕುತೂಹಲ ರಾಜ್ಯದಲ್ಲಷ್ಟೇ ಅಲ್ಲ ದಿಲ್ಲಿಯಲ್ಲಿರುವ ನಾಯಕರಲ್ಲೂ ಇದೆ. ಹೈ-ಕಮಾಂಡ್ ರಚಿಸುವ ಹೊಸ ರಾಯಭಾರಿಗಳನ್ನು ತಕ್ಕಡಿಯಲ್ಲಿ ಕೊಂಚವೂ ಅಲುಗಾಡದಂತೆ ಬೊಮ್ಮಾಯಿ ಸಂಭಾಳಿಸಬೇಕಿದೆ.

-ಸ್ವಾತಿ ಚಂದ್ರಶೇಖರ್
swathichandrashekar92@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com