'ಡಿ.ಕೆ. ಶಿವಕುಮಾರ್ ನಮ್ಮ ಸರ್ವೋಚ್ಛ ನಾಯಕ, ಅವರು ಹೇಳಿದ ಮಾತುಗಳನ್ನು ನಾವೆಲ್ಲಾ ಕೇಳಬೇಕು': ಡಾ. ಜಿ. ಪರಮೇಶ್ವರ್

ರಾಜಕಾರಣದಲ್ಲಿ ನಾಯಕರ ಅನುಯಾಯಿಗಳು, ಅವರ ಜೊತೆ ಗುರುತಿಸಿಕೊಂಡವರಿರುತ್ತಾರೆ. ಅಂತವರಿಗೆ ಸಹಜವಾಗಿ ತಮ್ಮ ನಾಯಕರೇ ಮುಖ್ಯಮಂತ್ರಿಯಾಗಬೇಕೆಂದು ಆಸೆಯಿರುತ್ತದೆ, ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

ತುಮಕೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು ಎಂಬುದು ಶಾಸಕ ಜಮೀರ್ ಅಹ್ಮದ್ ಅವರ ವೈಯಕ್ತಿಕ ಅಭಿಪ್ರಾಯವಷ್ಟೆ. ರಾಜಕಾರಣದಲ್ಲಿ ನಾಯಕರ ಅನುಯಾಯಿಗಳು, ಅವರ ಜೊತೆ ಗುರುತಿಸಿಕೊಂಡವರಿರುತ್ತಾರೆ. ಅಂತವರಿಗೆ ಸಹಜವಾಗಿ ತಮ್ಮ ನಾಯಕರೇ ಮುಖ್ಯಮಂತ್ರಿಯಾಗಬೇಕೆಂದು ಆಸೆಯಿರುತ್ತದೆ, ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಜೊತೆ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್ ಅವರಿಗೆ ಸ್ವಾಭಾವಿಕವಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕೆಂದು ಆಸೆ ಇರಬಹುದು. ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ. ಆದರೆ ಇಲ್ಲಿ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬಹುದು, ಎಲ್ಲಾ ಕಾಂಗ್ರೆಸ್ ಮುಖಂಡರಿಗೂ ನಾನು ಹೇಳುವುದು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸವನ್ನು ಮೊದಲು ಮಾಡಬೇಕು. ಅದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ.

ಕರ್ನಾಟಕದ ಬಡ ಜನರು ಇವತ್ತು ಬಿಜೆಪಿಯ ಆಡಳಿತದಿಂದ ನೋವು ತಿನ್ನುತ್ತಿದ್ದಾರೆ, ಕೆಟ್ಟ ಆಡಳಿತವನ್ನು ನೀಡುತ್ತಿರುವ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕು, ಅದಾದ ಮೇಲೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಕರೆಯುತ್ತಾರೆ. ಆ ಸಭೆಯಲ್ಲಿ ನಾಯಕನನ್ನು ಆಯ್ಕೆ ಮಾಡಲು ಹೇಳುತ್ತಾರೆ. ಅಲ್ಲಿ ತೀರ್ಮಾನವಾಗಬೇಕೆ ಹೊರತು ಅಲ್ಲಿ ಇಲ್ಲಿ ಮಾತನಾಡಿದರೆ ಆಗುವುದಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ವ್ಯವಹಾರಗಳಿಗೆ ರಾಜ್ಯಾಧ್ಯಕ್ಷರು ಸುಪ್ರೀಂ ನಾಯಕನಾಗುತ್ತಾರೆ. ಹಾಗಾಗಿ ಜಮೀರ್ ಅಹ್ಮದ್ ಮಾತ್ರವಲ್ಲ, ನಾವೆಲ್ಲರೂ ಡಿ ಕೆ ಶಿವಕುಮಾರ್ ಅವರು ಪಕ್ಷದ ಬಗ್ಗೆ ಹೇಳುವ ಮಾತುಗಳನ್ನು ಕೇಳಲೇಬೇಕು. 

ಜಮೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಳ್ಳುವ ಹಂತಕ್ಕೆ ತಲುಪಿಲ್ಲ ಎಂದು ಭಾವಿಸಿದ್ದೇನೆ, ಕಾಂಗ್ರೆಸ್ ನಲ್ಲಿ ಯಾವುದೇ ಬಣ ಇಲ್ಲ. ಒಂದು ವೇಳೆ ಇದ್ದರೆ ಅದನ್ನು ಪಕ್ಷದ ರಾಜ್ಯ ಉಸ್ತುವಾರಿ ಸರಿಪಡಿಸುತ್ತಾರೆ. ಹೈಕಮಾಂಡ್ ನ ಆದೇಶ ಮೇರೆಗೆ. ನಮ್ಮಲ್ಲಿ ಇದುವರೆಗೆ ಬಣ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಭಾವಿಸಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com