'ಕೈ' ಸಿಎಂ ಅಭ್ಯರ್ಥಿ: ಸಿದ್ದರಾಮಯ್ಯ ಪರ ಶಾಸಕರ ಬ್ಯಾಟಿಂಗ್, ನನಗೂ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದ ಮಾಜಿ ಸಿಎಂ!

ಇತ್ತ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಿಎಂ ಯಡಿಯೂರಪ್ಪನವರ ಬದಲಾವಣೆಯ ಕೂಗು ಸ್ವಲ್ಪ ತಣ್ಣಗಾಗುತ್ತಿದ್ದಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ನಲ್ಲಿ ಸಿಎಂ ಕೂಗು ಜೋರಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ)
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಇತ್ತ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಿಎಂ ಯಡಿಯೂರಪ್ಪನವರ ಬದಲಾವಣೆಯ ಕೂಗು ಸ್ವಲ್ಪ ತಣ್ಣಗಾಗುತ್ತಿದ್ದಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ನಲ್ಲಿ ಸಿಎಂ ಕೂಗು ಜೋರಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಬೇಕೆಂದು ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಕೂಡ ಬಣ ರಾಜಕೀಯ ಜೋರಾಗುತ್ತಿದೆಯಾ ಎಂಬ ಭಾವನೆ ಮೂಡುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ನ್ನು ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿ, ಪಕ್ಷದ ಬೆಳವಣಿಗೆ ಬಗ್ಗೆ ಚರ್ಚಿಸಿ ಬಂದಿದ್ದಾರೆ. ಸಿಎಂ ಯಾರು ಎಂದು ಚರ್ಚೆ ಬೇಡ, ಪಕ್ಷದ ಬೆಳವಣಿಗೆಗೆ, ಮುಂದಿನ ಬಾರಿ ಅಧಿಕಾರಕ್ಕೆ ತರುವುದರತ್ತ ಗಮನ ನೀಡಿ ಎಂದು ರಾಹುಲ್ ಗಾಂಧಿ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ನಾಯಕರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ.

ಇಂದು ಮತ್ತೆ ಸಿಎಂ ಕೂಗು ಜೋರಾಗಿದೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಶಾಸಕರ ಸಮಸ್ಯೆಯೇನು ಎಂದು ಕೇಳುತ್ತಿಲ್ಲ. ಪಕ್ಷದ ಅಧ್ಯಕ್ಷರಾಗಿ ಸೂಕ್ತ ಕೆಲಸ ಮಾಡುತ್ತಿಲ್ಲ. ಶಾಸಕರ ಸಮಸ್ಯೆಗಳನ್ನು ಕೇಳಲಿಕ್ಕಾಗದವರು ಸಿಎಂ ಆಗಿ ರಾಜ್ಯದ ಜನತೆಗೇನು ಮಾಡುತ್ತಾರೆ, ರಾಜ್ಯಾಧ್ಯಕ್ಷರಿಗೆ ಕಿವಿ ಕೇಳಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯನವರೇ ಮುಂದಿನ ಬಾರಿ ಮುಖ್ಯಮಂತ್ರಿಯಾಗಬೇಕು ಎಂದು ಅಖಂಡ ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.

ಇನ್ನು ಹರಿಹರ ಶಾಸಕ ರಾಮಪ್ಪ ಕೂಡ ಸಿದ್ದರಾಮಯ್ಯನವರಿಗೆ ವಯಸ್ಸಾಗುತ್ತಿದೆ, ಡಿ ಕೆ ಶಿವಕುಮಾರ್ ಗೆ ಇನ್ನೂ ವಯಸ್ಸಿದೆ, ಹಾಗಾಗಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಲಿ, ಅವರು ಸಿಎಂ ಆದರೆ ಬಡವರಿಗೆ, ರೈತರಿಗೆ, ಮಧ್ಯಮ ವರ್ಗದವರಿಗೆ ಎಲ್ಲರಿಗೂ ಒಳ್ಳೆಯದಾಗುತ್ತದೆ. 2023ಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿ ಎಂದು ಅಭಿಲಾಷೆ ಹೊರಹಾಕಿದ್ದಾರೆ. 

ಪಕ್ಷದಲ್ಲಿ ಒಬ್ಬೊಬ್ಬ ಶಾಸಕರು ಹೀಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಬಗ್ಗೆ ಇಂದು ಸುದ್ದಿಗಾರರು ಪ್ರತಿಕ್ರಿಯೆ ಕೇಳಿದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರ ಹೇಳಿಕೆಗೆ ನಾನೇನೂ ಮಾಡುವುದಕ್ಕೆ ಆಗುವುದಿಲ್ಲ ನನಗೂ ಶಾಸಕರ ಹೇಳಿಕೆಗೂ ಸಂಬಂಧವಿಲ್ಲ. ಅವರೇನೋ ಹೇಳಿದ್ರೆ ನಾನೇನು ಮಾಡಲು ಆಗುತ್ತೆ? ಎಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ವಿಚಾರವಾಗಿ ಹೇಳಿಕೆ ನೀಡುವ ಶಾಸಕರ ಮೇಲೆ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಇಂದು ಸಿದ್ದರಾಮಯ್ಯನವರನ್ನು ಪ್ರತಿಕ್ರಿಯೆ ಕೇಳಿದಾಗ ಈ ರೀತಿ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com