ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿ ತಯಾರಿ

 ಕೋವಿಡ್ -19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಬಿಜೆಪಿ
ಬಿಜೆಪಿ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಹಿನ್ನಲೆಯಲ್ಲಿ ಆಡಳಿತಾರೂಢ ಬಿಜೆಪಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಕೊರೋನಾ ಸನ್ನಿವೇಶ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರವೇ ಈ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಸಾಧ್ಯತೆಯಿದೆ.

ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶನಿವಾರ ಚುನಾವಣೆಗೆ ಮುನ್ನ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ಕ್ರಮಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಮಿತಿ ಸಭೆಯ ಉದ್ಘಾಟನಾ ಸೆಷನ್ ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪಕ್ಷದ ಮುಖಂಡರಿಗೆ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿರಬೇಕು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ತಯಾರಾಗಿ ಎಂದು ಕರೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಉತ್ತಮ ಸಾಧನೆ ತೋರುವುದರಿಂದ 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಲಿದೆಎಂದು ಅವರು ಒತ್ತಿ ಹೇಳಿದರು. ಸಭೆಯ ನಂತರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಅವರು ಜುಲೈ 1 ರಿಂದ 15 ರವರೆಗೆ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾಗಿಯೂ ಜುಲೈ 16 ರಿಂದ 30 ರವರೆಗೆ ಎಲ್ಲಾ ಮಂಡಳಿಗಳಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು.

ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದರೆ, ಈ ಎಲ್ಲಾ ಸಭೆಗಳು ಪ್ರೋಟೋಕಾಲ್‌ಗಳನ್ನು ಅನುಸರಿಸಿ ಪ್ರತ್ಯಕ್ಷ ಹಾಗೂ ವರ್ಚುವಲ್ ಎರಡೂ ಮಾದರಿಯಲ್ಲಿ  ನಡೆಯುತ್ತವೆ. ಪಕ್ಷವು ಬೂತ್ ಅಧ್ಯಕ್ಷರಿಗೆ ನೇಮ್‌ಪ್ಲೇಟ್‌ಗಳನ್ನು ನೀಡಲಿದ್ದು, ಆಗಸ್ಟ್‌ನಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜ್ಯಮಟ್ಟದ ಸಮಾವೇಶವನ್ನು ನಡೆಸಲು ಯೋಜಿಸಿದೆ.

ನವದೆಹಲಿಯಿಂದ ನಡೆದ ಸಭೆಯಲ್ಲಿ ಭಾಗವಹಿಸಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಂಘಟನೆಯನ್ನು ಬಲಪಡಿಸುವತ್ತ ಗಮನಹರಿಸುವಂತೆ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಗೊಂಡ ಹಲವಾರು ಉಪಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೇಳಿದ್ದಾರೆ. ಈ ವೇಳೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಕೈಗೊಂಡ ಕ್ರಮಗಳನ್ನು ಶ್ಲಾಘಿಸಿ ಮತ್ತು ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರವನ್ನು ಖಂಡಿಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕೋವಿಡ್ ನಿಂದ  ಸಾವನ್ನಪ್ಪಿದ 4,531 ಜನರ ಅಂತಿಮ ವಿಧಿಗಳನ್ನು ನಡೆಸಿದ ಕಾರ್ಯಕರ್ತರನ್ನು ಪಕ್ಷವು ಸನ್ಮಾನಿಸುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್  ಹೇಳಿದರು. ಕೋವಿಡ್-19ನಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ಮತ್ತು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ಉಪಕ್ರಮವನ್ನು ಅವರು ಶ್ಲಾಘಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಸರ್ಕಾರವನ್ನು ಟೀಕಿಸುವುದು ಬಿಟ್ಟು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಯಾವುದೇ ಸಹಾಯವನ್ನು ನೀಡುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಕೋವಿಡ್ ಲಸಿಕೆ ಅಭಿಯಾನದಲ್ಲಿ  ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com