ಹಾನಗಲ್ ನಲ್ಲಿ ಬಿಜೆಪಿ ಸೋಲು ಸಾಮೂಹಿಕ ಸೋಲು: ಸಚಿವ ವಿ ಸೋಮಣ್ಣ

ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗಾಗಿರುವ ಸೋಲು ಅದು ಸಾಮೂಹಿಕ ಸೋಲು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಹೇಳಿದ್ದಾರೆ.
ವಿ.ಸೋಮಣ್ಣ
ವಿ.ಸೋಮಣ್ಣ

ಬೆಂಗಳೂರು: ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿಗಾಗಿರುವ ಸೋಲು ಅದು ಸಾಮೂಹಿಕ ಸೋಲು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮಣ್ಣ, ಸಾಮೂಹಿಕ‌ ನಾಯಕತ್ವದಲ್ಲಿ ನಾವು ಚುನಾವಣೆ ಎದುರಿಸಿದ್ದೆವು. ಮಾಜಿ ಸಿಎಂ ಯಡಿಯೂರಪ್ಪ ಸಹ ಮೂರು ದಿನ‌ ಅಲ್ಲೇ ಇದ್ದರು. ಸೋಲು ಗೆಲುವು ಯಾರದ್ದು ಎಂಬ ಪ್ರಶ್ನೆ ಇಲ್ಲ. ಕಾಂಗ್ರೆಸ್ ನ ಶ್ರೀನಿವಾಸ್ ಮಾನೆ ಕೋವಿಡ್ ಸಮಯದಲ್ಲಿ ಜನರಿಗೆ ಮಾಡಿರುವ ಸಹಕಾರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದೆ ಎಂದರು.

ಮುಂದಿನ ದಿನಗಳಲ್ಲಿ ಹಾನಗಲ್ ನಲ್ಲಿ ಬಿಜೆಪಿ ಮತ್ತೆ ಬಲವಾಗಲಿದೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಸಿಂಧಗಿಯಲ್ಲಿ ಮುಸ್ಲಿಂರು ಅತಿ ಹೆಚ್ಚು ಮತ ಹಾಕಿದ್ದಾರೆ. ಉದಾಸಿಯವರ ಆರೋಗ್ಯ ಕ್ಷೀಣಿಸಿದ್ದರಿಂದ ಕೋವಿಡ್ ಸಂದರ್ಭದಲ್ಲಿ ಹಾನಗಲ್ ನಲ್ಲಿ ಓಡಾಡಲು ಆಗಿರಲಿಲ್ಲ. ಜನ ಉಪಕಾರ ಸ್ಮರಿಸಿ ಮಾನೆಯನ್ನು ಗೆಲ್ಲಿಸಿದ್ದಾರೆ. ಹಾನಗಲ್‌ನಲ್ಲಿ ಬಿಜೆಪಿ ವೋಟ್ ಎಲ್ಲಿಯೂ ಹೋಗಿಲ್ಲ. ಹಾನಗಲ್‌ನಲ್ಲಿ ನಮಗೆ ಕಳೆದ ಸಲ ಬಂದಿದ್ದ ಮತಗಳು ಬಂದಿವೆ. ಸಜ್ಜನರ್ 79,513 ಮತ ತೆಗೆದುಕೊಂಡಿದ್ದಾರೆ. ಮಾನೆ 87+ ಸಾವಿರ ಮತ ತೆಗೆದುಕೊಂಡಿದ್ದಾರೆ. ನಮ್ಮ ಮತ ಎಲ್ಲೂ ಹೋಗಿಲ್ಲ. ನಮ್ಮ ಮತ ನಮಗೇ ಬಂದಿವೆ. ಈ ಉಪಚುನಾವಣೆ ಗೆಲುವು ಮಾನೆ ಗೆಲುವೇ ಹೊರತು ಕಾಂಗ್ರೆಸ್ ಗೆಲುವಲ್ಲ ಎಂದರು.

ಸಿಂಧಗಿಯಲ್ಲಿ ಬಿಜೆಪಿಗೆ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದು, ಹಾನಗಲ್ ನಲ್ಲಿ ಕಡಿಮೆ ಅಂತರದಲ್ಲಿ ಮಾತ್ರ ಪಕ್ಷಕ್ಕೆ ಹಿನ್ನಡೆಯಾಗಿದೆ. ಸಿಂಧಗಿಯಲ್ಲಿ ಅಭಿವೃದ್ಧಿ ಬಗ್ಗೆ ಪ್ರಚಾರ ನಡೆಸಿ ಅಭಿವೃದ್ಧಿಗೆ ಅವಕಾಶ ನೀಡುವಂತೆ ಮನವಿ ಮಾಡಿ ಪ್ರಚಾರ ನಡೆಸಿದ್ದೆವು. ಅದಕ್ಕೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಸಚಿವರಾದ ಗೋವಿಂದ ಕಾರಜೋಳ, ನಾನು, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ ಎಲ್ಲರೂ ಕೂಡ ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ, ಸಿಂಧಗಿಯಲ್ಲಿ ಗೆದ್ದಿರುವುದಾಗಿ ಸೋಮಣ್ಣ ಸ್ಪಷ್ಟಪಡಿಸಿದರು.

ಜನಾದೇಶಕ್ಕೆ ತಲೆಬಾಗುವುದಾಗಿ ಹೇಳಿದ ಸಚಿವ ಸಿ.ಸಿ.ಪಾಟೀಲ್, ಹಾನಗಲ್ ಸೋಲಿನ ಹೊಣೆ ಸಿಎಂ ಮೇಲೆ ಹಾಕಲು ಆಗುವುದಿಲ್ಲ. ಉಪಚುನಾವಣೆ ಸಂದರ್ಭದಲ್ಲಿ ಕೆಲವು ನ್ಯೂನತೆಗಳಾಗಿದ್ದು, ಅವನ್ನು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ‌ ಸಲ ಹಾನಗಲ್ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಟ್ ಕಾಯನ್ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಸಿದ್ದರಾಮಯ್ಯ ಆರೋಪರಕ್ಕೆ ಪ್ರತಿಕ್ರಿಯಿಸಿದ ಅವರು, ಬೀಟ್ ಅಂದರೆ ನಮಗೆ ಗೊತ್ತಿರುವುದು ಪೊಲೀಸ್ ಬೀಟ್ ಅಷ್ಟೆ. ನಾನು ಬೆಂಗಳೂರಿಗೆ ಬಂದು 51 ವರ್ಷ ಆಯ್ತು. ಸಿದ್ದರಾಮಯ್ಯನವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅದೇನಾದ್ರೂ ಇದ್ರೆ ಹೇಳಲಿ. ಹಿಟ್ ಅಂಡ್ ರನ್ ಬೇಡ ಅದೇನಾದ್ರೂ ಇದ್ರೂ ಹೇಳಲಿ. ಸಿದ್ದರಾಮಯ್ಯ ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದವರು. ಮಾತನ್ನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನ್ನಾಡಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com