ಸಿದ್ದರಾಮಯ್ಯ 'ನಾಯಕತ್ವ' ಹಾಗೂ ಶಿವಕುಮಾರ್ 'ಮಾರ್ಗದರ್ಶನದಲ್ಲಿ' ಚುನಾವಣೆ: ಉರಿವ ಬೆಂಕಿಗೆ ತುಪ್ಪ ಸುರಿದ ಕಾಂಗ್ರೆಸ್ ಶಾಸಕ!

ಡಿಕೆ ಶಿವಕುಮಾರ್‌ ಅವರೇ, ಹಾನಗಲ್ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸಂಭ್ರಮವಿರಲಿಲ್ಲ. ಏಕೆಂದರೆ ನಿಮ್ಮ ಸಂತಸವನ್ನು ಅದಾಗಲೇ ಸಿದ್ದರಾಮಯ್ಯ ಕಸಿದು ಬಿಟ್ಟಿದ್ದಾರಲ್ಲವೇ?
ಸಿದ್ದರಾಮಯ್ಯ ಮತ್ತು ಶಿವಕುಮಾರ್
ಸಿದ್ದರಾಮಯ್ಯ ಮತ್ತು ಶಿವಕುಮಾರ್

ಬೆಂಗಳೂರು: ಸಿದ್ದರಾಮಯ್ಯ ಅವರ 'ನಾಯಕತ್ವದಲ್ಲಿ' ಹಾಗೂ ಶಿವಕುಮಾರ್ ಅವರ 'ಮಾರ್ಗದರ್ಶನದಲ್ಲಿ' ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬೈರತಿ ಸುರೇಶ್ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್‌ ಅವರನ್ನು ಮಾರ್ಗದರ್ಶಿ ಮಂಡಳಿಗೆ ಸೇರಿಸುವುದಕ್ಕೆ ಸಿದ್ದರಾಮಯ್ಯ ಬಣ ಹುನ್ನಾರ ನಡೆಸುತ್ತಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಡಿಕೆ ಶಿವಕುಮಾರ್‌ ಅವರೇ, ಹಾನಗಲ್ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸಂಭ್ರಮವಿರಲಿಲ್ಲ. ಏಕೆಂದರೆ ನಿಮ್ಮ ಸಂತಸವನ್ನು ಅದಾಗಲೇ ಸಿದ್ದರಾಮಯ್ಯ ಕಸಿದು ಬಿಟ್ಟಿದ್ದಾರಲ್ಲವೇ? ಕಸರತ್ತು ಮಾಡಿ ಕೆಪಿಸಿಸಿ ಪಟ್ಟ ಒಲಿಸಿಕೊಂಡರೂ ಈಗ ದ್ವಿತೀಯ ಸಾಲಿನ ನಾಯಕನಂತಾಗಿರುವ ಶಿವಕುಮಾರ್ ಅವರ ಬಗ್ಗೆ ಅನುಕಂಪವಿದೆ ಎಂದಿದೆ.

ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ನುಣುಚಿಕೊಳ್ಳುವ ಶಿವಕುಮಾರ್‌ ಅವರೇ, ನಿಮಗೊಂದು ಸವಾಲು. ನಿಮ್ಮ ಪದವಿಯ ಮೇಲೆ ನಿಮಗೆ ಹಿಡಿತವಿದ್ದರೆ ಶೀಘ್ರದಲ್ಲೇ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿ, ನೋಡೋಣ. ಪಟ್ಟಿ ಪ್ರಕಟವಾದ ಕ್ಷಣದಿಂದ ಪದಚ್ಯುತಿಯ ಕಾರ್ಯಾಚರಣೆ ಆರಂಭವಾಗಲಿದೆ ಎಂಬ ಭಯ ಕಾಡುತ್ತಿದೆಯೇ?" ಎಂದು ಕಾಲೆಳೆದಿದೆ.

ಡಿಕೆ‌ ಶಿವಕುಮಾರ್‌ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಪ್ರಯಾಸದ ಎರಡನೇ ಗೆಲುವು ಕಾಂಗ್ರೆಸ್‌ಗೆ ಲಭಿಸಿದೆ. ಆದರೆ ಈ ಗೆಲುವನ್ನು ಸಂಭ್ರಮಿಸುವುದಕ್ಕೂ ಡಿಕೆ ಶಿವಕುಮಾರ್‌ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ಉಪಚುನಾವಣೆ ಯಶಸ್ಸಿಗೆ ನಾನೇ ಕಾರಣ ಎಂಬ ಪೈಪೋಟಿಗೆ ಡಿಕೆ ಶಿವಕುಮಾರ್‌ ಸೋತು ಹೋಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com