ಬಿಟ್ ಕಾಯಿನ್ ಪ್ರಕರಣ: ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಕಾಂಗ್ರೆಸ್ ಒತ್ತಾಯ

ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬಿಟ್‌ಕಾಯಿನ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬಿಟ್‌ಕಾಯಿನ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಟ್‌ಕಾಯಿನ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ. ರಾಜ್ಯ ಸರ್ಕಾರದ ಸಂಸ್ಥೆಗಳ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮನಸ್ಸನ್ನು ಬದಲಾಯಿಸುವ ಮಾದಕ ದ್ರವ್ಯಗಳನ್ನು ಏಕೆ ನೀಡಲಾಯಿತು ಎಂಬುದನ್ನು ಸರ್ಕಾರ ವಿವರಿಸಬೇಕು ಎಂದರು. ‘‘ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಹಾಗೂ ಸಚಿವರಿಗೆ ತಿಳಿಯದಂತೆ ಈ ರೀತಿ ಮಾಡಬಹುದೇ? ಎಂದು ಪ್ರಶ್ನಿಸಿದರು.

ಒಟ್ಟು 100 ಕೋಟಿ ಮೌಲ್ಯದ ಬಿಟ್‌ಕಾಯಿನ್‌ಗಳು ನಾಪತ್ತೆಯಾಗಿದ್ದು, ಅವು ಏನಾದವೂ ಎಂಬುದನ್ನು ರಾಜ್ಯ ಸರ್ಕಾರ ವಿವರಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.

ಸೈಬರ್ ಕ್ರೈಮ್ ಪೊಲೀಸ್ ಇನ್ಸ್‌ಪೆಕ್ಟರ್ ಮುಂದೆ ಶ್ರೀಕಿ ಸ್ವಯಂಪ್ರೇರಿತ ಸಹಿ ಮಾಡಿದ ಹೇಳಿಕೆಯ ಪ್ರಕಾರ, ಅವರು 2500 ಕೋಟಿ ರೂಪಾಯಿ ಮೌಲ್ಯದ 5000 ಬಿಟ್‌ಕಾಯಿನ್‌ಗಳನ್ನು ಹ್ಯಾಕ್ ಮಾಡಿದ್ದಾರೆ.  ಈಗ ಅವು ಎಲ್ಲಿ, ಎಷ್ಟು ಬಳಸಿದ್ದಾನೆ, ಎಷ್ಟು ಹಂಚಿದ್ದಾನೆ ಎಂದು  ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದರು.

ಶ್ರೀಕಿಯನ್ನು ಬಂಧಿಸಿದ ನಂತರ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಹಲವು ಅನುಮಾನಗಳಿವೆ.  9 ಕೋಟಿ ರೂಪಾಯಿ ಮೌಲ್ಯದ ಬಿಟ್‌ ಕಾಯಿನ್‌ಗಳನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದರು. ಇನ್‌ಸ್ಪೆಕ್ಟರ್‌ ಶ್ರೀಧರ್‌ ಪೂಜಾರ್‌ ಎಂಬುವವರು ಪಂಚನಾಮೆಗೆ ಸಾಕ್ಷಿಗಳನ್ನಾಗಿ ಬೆಸ್ಕಾಂ ಲೈನ್‌ಮನ್‌ ಮತ್ತು ವಾಣಿಜ್ಯ ತೆರಿಗೆ ಇಲಾಖೆಯವರನ್ನು ಕರೆಸಿದ್ದರು. ಬಿಟ್‌ಕಾಯಿನ್‌ ಬಗ್ಗೆ ಲೈನ್‌ಮನ್‌ಗಳಿಗೆ ಏನು ಗೊತ್ತಿರಲು ಸಾಧ್ಯ ಎಂದರು.

ಬಿಟ್‌ಕಾಯಿನ್‌ ವರ್ಗಾಯಿಸಿಕೊಂಡು ಹವಾಲಾ ಮೂಲಕ ಹಣ ಕೊಡುತ್ತಿದ್ದ ರಾಬಿನ್‌ ಖಂಡೇಲ್‌ವಾಲಾ ಎಂಬಾತ ಮೌರ್ಯ ಹೋಟೆಲ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದ. ಆತನ ಬಗ್ಗೆ ಸರಿಯಾದ ತನಿಖೆಯನ್ನೇ ನಡೆಸಿಲ್ಲ. ಶ್ರೀಕಿ ವಾಲೆಟ್‌ನಲ್ಲಿ 31 ಬಿಟ್‌ಕಾಯಿನ್‌ಗಳು ಇದ್ದವು ಎಂದು ಹೇಳಲಾಗಿತ್ತು. ನಂತರ ವಾಲೆಟ್‌ ತೆರೆದಾಗ ಅಲ್ಲಿ 186 ಬಿಟ್‌ಕಾಯಿನ್‌ಗಳು ಇದ್ದವು. 31 ಬಿಟ್‌ಕಾಯಿನ್‌ಗಳು 186 ಆಗಿದ್ದು ಹೇಗೆ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವಲ್ಲೂ ಪೊಲೀಸರು ವಿಳಂಬ ಮಾಡಿದ್ದಾರೆ. ಇದೆಲ್ಲವೂ ಅಕ್ರಮ ನಡೆದಿರುವ ಬಗ್ಗೆ ಸುಳಿವು ನೀಡುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com