'ನನಗೆ ಶ್ರೀಕಿ ಪರಿಚಯ ಇದ್ದಿದ್ದು ನಿಜ, ಆದರೆ ಸಂಪರ್ಕವಿಲ್ಲ, ಆತ ಬಿಟ್ ಕಾಯಿನ್ ಹ್ಯಾಕಿಂಗ್ ಮಾಡುತ್ತಿದ್ದುದು ಗೊತ್ತಿಲ್ಲ': ಮೊಹಮ್ಮದ್ ನಲಪಾಡ್ 

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಗೆ ಸಂಬಂಧವಿದೆ ಎಂಬ ಸುದ್ದಿ ಕೇಳಿಬರುತ್ತಿದೆ. 
ಮೊಹಮ್ಮದ್ ನಲಪಾಡ್
ಮೊಹಮ್ಮದ್ ನಲಪಾಡ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್ ಹಗರಣದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಗೆ ಸಂಬಂಧವಿದೆ ಎಂಬ ಸುದ್ದಿ ಕೇಳಿಬರುತ್ತಿದೆ. 

ಶ್ರೀಕಿ ಹ್ಯಾಕರ್ ಎಂಬುದು ನಲಪಾಡ್ ಗೆ ಗೊತ್ತಿತ್ತು. ಇದೀಗ ನಲಪಾಡ್ ಹೆಸರು ಕೇಳಿಬರುತ್ತಿರುವುದರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿ ರಕ್ಷಾ ರಾಮಯ್ಯಗೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಅಸಮಾಧಾನ ಎದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಶ್ರೀಕಿ ಜೊತೆಗಿನ ಸಂಬಂಧದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ನಲಪಾಡ್, ನನಗೆ ಶ್ರೀಕಿಯ ಪರಿಚಯವಿದ್ದಿದ್ದು ನಿಜ, ಪರಿಚಯವಿಲ್ಲ ಎಂದರೆ ತಪ್ಪಾಗುತ್ತದೆ. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯಿತು. ಆಧಾರ್ ಕಾರ್ಡ್ ಕೇಳಿ ಸ್ನೇಹ ಮಾಡಲು ಸಾಧ್ಯವೇ, ಆದರೆ ಈಗ ನನಗೂ ಶ್ರೀಕಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಶ್ರೀಕಿ ಬಿಟ್ ಕಾಯಿನ್ ವ್ಯವಹಾರದಲ್ಲಿ ಹ್ಯಾಕ್ ಮಾಡುತ್ತಾನೋ ಏನೋ ನನಗೆ ಗೊತ್ತಿಲ್ಲ, ಹ್ಯಾಕ್ ಮಾಡೋದು, ಬಿಡೋದು ಅವನ ವೈಯಕ್ತಿಕ ಕೆಲಸ, ಅದರ ಬಗ್ಗೆ ನಾವು ಚರ್ಚೆ ಮಾಡಲು ಹೋಗಿಲ್ಲ. ಫರ್ಜಿ ಕೆಫೆ ಘಟನೆ ಬಳಿಕ ನನಗೂ ಶ್ರೀಕಿಗೂ ಸಂಪರ್ಕವಿಲ್ಲ. ಇದನ್ನು ಸ್ವತಃ ಶ್ರೀಕಿಯೇ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಅದಾದ ನಂತರ ಶ್ರೀಕಿಗೂ ನನಗೂ ಯಾವುದೇ ಸಂಪರ್ಕವಿಲ್ಲ, ಬಿಟ್ ಕಾಯಿನ್ ಬಗ್ಗೆ ನಾವು ಚರ್ಚೆ ನಡೆಸಿಯೇ ಇಲ್ಲ ಎಂದು ತಿಳಿಸಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಏಕೆ ಆತಂಕಪಡಲಿ, ಸ್ವಲ್ಪ ಸಂಶಯ ಬಂದಿದ್ದರೂ ಪೊಲೀಸರು ಬಿಡುತ್ತಿರಲಿಲ್ಲ. ಅಂದು ಫರ್ಜಿ ಕೆಫೆಗೆ ಶ್ರೀಕಿ ಆಕಸ್ಮಿಕವಾಗಿ ಬಂದಿದ್ದಷ್ಟೆ ಹೊರತು ನಾವು ಕರೆದಿಲ್ಲ. ಬಿಟ್ ಕಾಯಿನ್ ಬಗ್ಗೆ ಆತನ ಜೊತೆ ಚರ್ಚೆಯೇ ಮಾಡಿಲ್ಲ ಎಂದರು.

2018ರಲ್ಲಿ ಒಂದು ತಪ್ಪು ಮಾಡಿದೆ. ನಾನು ಶಾಸಕನ ಮಗನಾಗಿದ್ದಕ್ಕೆ ಇಷ್ಟು ದೊಡ್ಡ ವಿಚಾರ ಆಗಿದೆ. ನಾನು ಹುಷಾರಾಗಿ ಇರಬೇಕಿತ್ತು. ಹೊಡೆದಾಟ ಕೇಸಲ್ಲಿ  117 ದಿನ ಜೈಲಲ್ಲಿ ಇದ್ದೆ. ಅದು ಹ್ಯಾಕಿಂಗ್, ಡ್ರಗ್ ಕೇಸು, ಕಳ್ಳತನ ಕೇಸಲ್ಲ, 307 ಕೇಸ್ 17 ದಿನದ ಒಳಗೆ ಹೊರ ಬರ್ತಾರೆ. ನಾನು ಯೂತ್ ಎಲೆಕ್ಷನ್ನಲ್ಲಿ ಗೆದ್ದೆ, ನನಗೂ ಕುಟುಂಬ ಇದೆ. ನಮ್ಮ ತಂದೆಗೆ ಇಂತ ಮಗ ಹುಟ್ಟಿದ ಅನ್ನೋದೇ ಒಂದು ಬ್ಲಾಕ್ ಮಾರ್ಕ್ ಆಗಿದೆ ಎಂದರು.

ಒಂದು ಬಾರಿ ನಾನು ತಪ್ಪು ಮಾಡಿದ್ದೆ, ಹಾಗೆಂದು ಈಗ ತಿದ್ದಿಕೊಂಡು ಉತ್ತಮ ಜೀವನ ನಡೆಸಲು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಪದೇಪದೇ ಟಾರ್ಗೆಟ್ ಮಾಡುತ್ತಿರುವುದೇಕೆ, ನನಗೂ ತಪ್ಪನ್ನು ತಿದ್ದಿಕೊಂಡು ಜೀವನ ನಡೆಸಲು ಅವಕಾಶ ಕೊಡಿ ಎಂದು ಮೊಹಮ್ಮದ್ ನಲಪಾಡ್ ಮನವಿ ಮಾಡಿಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com