'ಟಿಪ್ಪು ಬದುಕಿದ್ದರೆ ಏನಾಗುತ್ತಿತ್ತು ಎಂಬುದಕ್ಕೆ ಸಾವಿರ ಸಾಕ್ಷಿಗಳಿವೆ, ಹಿಂದೂ- ಕ್ರೈಸ್ತರ ರಕ್ತ ಮೆತ್ತಿದ ಕತ್ತಿಗಳಿವೆ'

ತಾಲಿಬಾನಿ ಉಗ್ರರ ಮನಸ್ಥಿತಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯ ಕನ್ನಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.
ಟಿಪ್ಪು(ಸಂಗ್ರಹ ಚಿತ್ರ)
ಟಿಪ್ಪು(ಸಂಗ್ರಹ ಚಿತ್ರ)

ಬೆಂಗಳೂರು: ತಾಲಿಬಾನಿ ಉಗ್ರರ ಮನಸ್ಥಿತಿಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯ ಕನ್ನಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್ ಅವರೆ, ನೀವು ಎಂತ “ಅದ್ಭುತ” ನಾಯಕರನ್ನು ಬೆಳೆಸುತ್ತಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಸಮ್ಮುಖದಲ್ಲೇ ತಲೆ ತಗೆಯುವ ಪ್ರಚೋದನಾಕಾರಿ ಹೇಳಿಕೆ ನೀಡಿದ ನಿಮ್ಮ ನಾಯಕನ ಮಾತಿಗೆ ನಿಮ್ಮ ಪ್ರತಿಕ್ರಿಯೆ ಏನು? ಎಂದು ಪ್ರಶ್ನಿಸಿದ್ದಾರೆ.

ಇದೇನಾ ನಿಮ್ಮ ಕಾಂಗ್ರೆಸ್ ಸಂಸ್ಕತಿ? ಅಂತಹ ಉಗ್ರವಾದಿ ಮನಸ್ಥಿತಿಯ ವ್ಯಕ್ತಿಯನ್ನು ನಿಮ್ಮ ಪಕ್ಕ ಕೂರಿಸಿಕೊಂಡು ತಲೆ ತೆಗೆಯುವ ಹೇಳಿಕೆ ಕೊಟ್ಟಾಗ ಗಪ್‍ಚುಪ್ ಆಗಿದ್ದೀರಲ್ಲ? ಒಳಗೊಂದು ಹೊರಗೊಂದು ಮುಖವಾಡದ ಬದುಕು ಏಕೆ ಮಾತೆತ್ತಿದರೆ “ಸಾಮರಸ್ಯ ನಮ್ಮ ಸಿದ್ಧಾಂತ” ಎಂದು ಬೊಗಳೆ ಬಿಡುವ ನೀವುಗಳು ಇಮ್ರಾನ್ ಪ್ರತಾಪ್ ಘರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಿರಾ? ಅವರ ತಲೆಕತ್ತರಿಸುವ ತಾಲಿಬಾನಿ ಮಾತುಗಳನ್ನು ಬೆಂಬಲಿಸುವಿರಾ ಎಂದು ರಾಜ್ಯದ ಜನತೆಗೆ ಸ್ಪಷ್ಟಪಡಿಸಿ. ಅವರ ಹೇಳಿಕೆಗೆ ನೀವು ಪ್ರತಿಕ್ರಿಯಿಸದಿದ್ದರೆ ಅದೇ ನಿಮ್ಮ ಪಕ್ಷ ಸಂಸ್ಕೃತಿಯ ದ್ಯೋತಕ ಎಂದು ತಿವಿದಿದ್ದಾರೆ.

“ಸೊರ”ಗಿದ (ಸೋನಿಯಾ, ರಾಹುಲ್) ಕಾಂಗ್ರೆಸ್ ನಾಯಕರೆ, ವಿವಿಧತೆಯಲ್ಲಿ ಏಕತೆ ಕಾಣುವ ಭಾರತದಲ್ಲಿ ಆಫ್ಗಾನಿಸ್ತಾನದ ತಾಲೀಬಾನಿಗಳ ರೀತಿ ತಲೆ ಕತ್ತರಿಸುವ ಮಾತನಾಡಿರುವ ನಿಮ್ಮ ಪಕ್ಷದ “ಅನಾಗರೀಕ ಅವಿದ್ಯಾವಂತ” (ಜಮೀರ್ ಸಾಹೇಬರ ಮಾತಿನಲ್ಲಿ ಓದಿಕೊಳ್ಳಿ) ನಾಯಕನ್ನು ಯಾವಾಗ ಉಚ್ಛಾಟಿಸುವಿರಿ? ಅವರ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು?

ಕಾಂಗ್ರೆಸ್ ನಾಯಕರೆ, ನೀವು ತಲೆ ಕತ್ತರಿಸುವ ತಾಲಿಬಾನಿಗಳ ಜೊತೆ ಇರುತ್ತೀರೋ ಅಥವಾ ವಸುದೈವ ಕುಟುಂಬಕಂ ಎಂದು ಸಾರಿದ ಭಾರತದಲ್ಲೋ ಸ್ಪಷ್ಟಪಡಿಸಿ. ಟಿಪ್ಪು ಬದುಕಿದ್ದರೆ ಏನಾಗುತ್ತಿತ್ತು ಎಂಬುದಕ್ಕೆ ಸಾವಿರ ಸಾಕ್ಷಿಗಳಿವೆ, ಹಿಂದೂ ಕ್ರೈಸ್ತರ ರಕ್ತ ಮೆತ್ತಿದ ಕತ್ತಿಗಳಿವೆ. ಮಡಿದ ಜನರು, ಮುರಿದ ದೇಗುಲ ಚರ್ಚ್ ಗಳು ಸಾಕ್ಷಿಭೂತವಾಗಿವೆ.

ಮತಾಂಧರ ಆಳ್ವಿಕೆಯಲ್ಲಿ ಕರಾಳ ಯುಗದತ್ತ ಸಾಗುತ್ತಿದ್ದ ಮೈಸೂರು 1799ರಲ್ಲಿ ಟಿಪ್ಪು ಸತ್ತ ಮೇಲೆ ಮೈಸೂರು ಸಂಸ್ಥಾನ ಪುನರ್ ಸ್ಥಾಪನೆಗೊಂಡು ಮೈಸೂರಿನ ಅಭಿವೃದ್ಧಿಯಾಯಿತು ಎಂಬುದು ಐತಿಹಾಸಿಕ ಸತ್ಯ. ಈಗ ಹೇಳಿ ನೀವು ಯಾರ ಜೊತೆಗೆ ನಿಲ್ಲುತ್ತೀರಿ? ಮತಾಂಧ ಟಿಪ್ಪು ಜೊತೆಗೋ ಅಥವಾ ಧರ್ಮಿಷ್ಠ ಮೈಸೂರು ಅರಸರ ಜೊತೆಗೋ?

ಗೂಂಡಾ ಸಂಸ್ಕೃತಿಯ ಬಾಡಿಗೆ ನಾಯಕನನ್ನು ಕರೆತಂದು ಊದಿಸಿದ ಪುಂಗಿಗೆ ನೀವುಗಳೇ ನರ್ತನ ಮಾಡಬೇಕಷ್ಟೇ. ಕನ್ನಡಿಗರ ಕೆಚ್ಚು, ಶೌರ್ಯ, ಸ್ವಾಭಿಮಾನ ಬಂದಿದ್ದು ಈ ದೇಶವನ್ನಾಳಿದ ಮೂಲ ರಾಜರಾದ ಮೌರ್ಯರು, ಶಾತವಾಹನರು, ವಿಜಯನಗರ ಅರಸರಿಂದ.ಆದರೆ ಟಿಪ್ಪು ಅಂತವವರಿಂದ ಕಾಂಗ್ರೆಸ್ ಗೆ ಬಂದ ಬಳುವಳಿ ಮತಾಂಧತೆ, ಕುಟಿಲ ಬುದ್ಧಿ ಮಾತ್ರ ಎಂದು ಕುಟುಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com