ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿ ಅವರು ಮಂಗಳವಾರ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬೆಳಗಾವಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿ ಅವರು ಮಂಗಳವಾರ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸಹ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಲಖನ್ ಜಾರಕಿಹೊಳಿ(ಪಕ್ಷೇತರ ಅಭ್ಯರ್ಥಿ), ಮಹಾಂತೇಶ ಕವಟಗಿಮಠ(ಬಿಜೆಪಿ) ಮತ್ತು ಚನ್ನರಾಜ್ ಹಟ್ಟಿಹೊಳಿ (ಕಾಂಗ್ರೆಸ್)ಯವರು ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ. ಮೂವರು ನಾಯಕರು ತಮ್ಮ ತಮ್ಮ ಬೆಂಬಲಿಗರ ಜೊತೆಗೆ ನಾಮಪತ್ರ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಲಖನ್ ಬೆಂಬಲಿಗರು ನೂರಾರು ವಾಹನಗಳಲ್ಲಿ ಬಂದು ಬೆಂಬಲ ಸೂಚಿಸಿದರು. ಸರ್ದಾರ್ ಮೈದಾನದಿಂದ ಮೆರವಣಿಗೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಈ ನಡುವೆ ಜಾರಕಿಹೊಳಿ ಸಹೋದರರು ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಎಲ್ಲಾ ಬೆಂಬಲಿಗರನ್ನು ಸಹೋದರನ ಪರವಾಗಿ ಒಗ್ಗೂಡಿಸುವ ಮೂಲಕ ಲಖನ್ ಅವರ ಗೆಲುವು ಖಚಿತಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದು ಕಂಡು ಬಂದಿತು.

ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿಯ ದೊಡ್ಡ ಭಾಗದ ಸದಸ್ಯರು ಲಖನ್ ಅವರಿಗೆ ಬೆಂಬಲ ಸೂಚಿಸಲು ಮುಂದಾದರು.

ಬೆಳಗಾವಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಕಾಂಗ್ರೆಸ್ ಹಟ್ಟಿಹೊಳಿ ಜಾಥಾ ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಹಾಲಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಕೂಡ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು.

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಹೆಚ್.ಎಸ್.ಗೋಪಿನಾಥ್ ರೆಡ್ಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದ್ದ ಸಂಸದ ಡಿ.ವಿ.ಸದಾನಂದಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಿಂದ ಪರಿಷತ್ ಚುನಾವಣೆಗೆ ಬೆಂಗಳೂರಿಂದ ಗೋಪಿನಾಥ್ ರೆಡ್ಡಿ ಸ್ಪರ್ಧಿಸಿದ್ದಾರೆ. ಅತ್ಯಂತ ಸಜ್ಜನ, ಪ್ರಾಮಾಣಿಕ ಗೋಪಿನಾಥ್ ರೆಡ್ಡಿ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದ್ದು, ಮೇಲ್ಮನೆಯಲ್ಲಿ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಬಿಜೆಪಿಯ ಹಳೆಯ ಕಾರ್ಯಕರ್ತರಾಗಿರುವ ಗೋಪಿನಾಥ್, ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರೇರೇಪಿತರಾದವರು. ಕಳೆದ ಬಾರಿ ಅಲ್ಪ ಅಂತರದಲ್ಲಿ ಪರಾಜಯಗೊಂಡಿರುವ ಗೋಪಿನಾಥ್, ಈ ಬಾರಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com