ಸಂವಿಧಾನದ ಪ್ರಸ್ತಾವನೆ ಓದಿದ ಸಿಎಂ ಬೊಮ್ಮಾಯಿ
ಸಂವಿಧಾನದ ಪ್ರಸ್ತಾವನೆ ಓದಿದ ಸಿಎಂ ಬೊಮ್ಮಾಯಿ

ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ವಿಪಕ್ಷಗಳ ದೂರು ಹಾಸ್ಯಾಸ್ಪದ: ಸಿಎಂ ಬೊಮ್ಮಾಯಿ

ಸರ್ಕಾರ ವಜಾ ಮಾಡುವ ಬಗ್ಗೆ ರಾಜ್ಯಪಾಲರಿಗೆ ವಿಪಕ್ಷಗಳು ದೂರು ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ಕಾಮಗಾರಿಗಳ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ್
Published on

ದಾವಣಗೆರೆ: ಸರ್ಕಾರ ವಜಾ ಮಾಡುವ ಬಗ್ಗೆ ರಾಜ್ಯಪಾಲರಿಗೆ ವಿಪಕ್ಷಗಳು ದೂರು ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ಕಾಮಗಾರಿಗಳ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ್ ಕಾಮಗಾರಿಗಳನ್ನು ತನಿಖೆಗೊಳಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿನ ಗುತ್ತಿಗೆದಾರರ ಪರ್ಸೆಂಟೇಜ್ ಅನುಭವವನ್ನು ಪತ್ರದಲ್ಲಿ ಬರೆದಿದ್ದಾರೆ. ಪರ್ಸೆಂಟೇಜ್ ಜನಕರೇ ಕಾಂಗ್ರೆಸ್​ನವರು. ಪ್ರತಿಬಾರಿ ಅದನ್ನು ಹೆಚ್ಚು ಮಾಡಿಕೊಂಡು ಬಂದಿರುವುದು ಅವರೇ ಹಾಗೂ ಇಬ್ಬರೂ ಕಾಂಗ್ರೆಸ್ ನಾಯಕರು ಪಿಸುಮಾತಿನಲ್ಲಿ ಈ ಬಗ್ಗೆ ಮಾತನಾಡಿರುವುದನ್ನು ಮಾಧ್ಯಮಗಳೇ ಚಿತ್ರೀಕರಿಸಿವೆ. ಅವರೇ ಪ್ರಾರಂಭಿಸಿ ಅವರೇ ದೂರು ಕೊಟ್ಟಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.

ಪತ್ರದಲ್ಲಿ ಯಾವುದೇ ನಿರ್ದಿಷ್ಟ ಕಾಮಗಾರಿ ಅಥವಾ ಇಲಾಖೆ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ಆದರೂ ತನಿಖೆ ಮಾಡಲಾಗುವುದು. ಈ ಪರ್ಸಂಟೇಜ್ ವಿಚಾರದಲ್ಲಿ ಕಾಂಗ್ರೆಸ್ ಬಹಳ ಆಸಕ್ತಿ ವಹಿಸಿರುವುದರಿಂದ ಅವರ ಕಾಲದ ಟೆಂಡರ ಕಾಮಗಾರಿಗಳ ಬಗ್ಗೆಯೂ ತನಿಖೆಗೆ ಒಳಪಡಿಸಲಾಗುವುದು ಎಂದು ಸಿಎಂ ಹೇಳಿದರು.

ಲಖನ್ ಜಾರಕಿಹೊಳಿ ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಲಖನ್ ಜಾರಕಿಹೊಳಿ ಅವರೊಂದಿಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ನಮ್ಮ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರಿಗೆ ಸಂಪೂರ್ಣ ಬೆಂಬಲ ದೊರಕಬೇಕು ಎನ್ನುವ ವಿಚಾರಗಳನ್ನು ತಿಳಿಸಲಾಗಿದೆ. ಅವರು ಈ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಜೆ.ಡಿ.ಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕೃತವಾಗಿ ಪಕ್ಷದಲ್ಲಿ ಈ ರೀತಿಯ ತೀರ್ಮಾನವಾಗಿಲ್ಲ. ನಮ್ಮ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲ ಪಡೆಯುತ್ತೇವೆ ಎಂಬ ಮಾತನ್ನು ಮಾತ್ರ ಹೇಳಿದ್ದಾರೆ. ನಾವು ಎಲ್ಲೆಡೆ ಸ್ಪರ್ಧೆ ಮಾಡಿದ್ದೇವೆ. ಹಿರಿಯ ನಾಯಕರು ತಮ್ಮ 40 ವರ್ಷದ ಅನುಭವದಲ್ಲಿ ಎಲ್ಲಿ ಬೆಂಬಲ ಪಡೆಯಲು ಸಾಧ್ಯವಿದೆಯೋ ಅಲ್ಲಿ ಪಡೆಯಲಾಗುವುದು ಎಂಬ ಮಾತನ್ನು ಹೇಳಿದ್ದಾರೆ ಎಂದರು.

ಬೆಳೆ ಹಾನಿಗೆ ಪರಿಹಾರ
ಈಗಾಗಲೇ ಪ್ರತಿಯೊಂದು ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಯೋಜನಾ ಇಲಾಖೆಗಳು ಜಂಟಿ ಸಮೀಕ್ಷೆ ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ಭತ್ತ, ಮೆಕ್ಕೆ ಜೋಳ, ದಕ್ಷಿಣ ಕರ್ನಾಟಕದಲ್ಲಿ ರಾಗಿ, ಭತ್ತ, ತರಕಾರಿ ಎಲ್ಲೇ ಪೈರುಗಳು ನೆಲಕಚ್ಚಿ ಮೊಳಕೆಯೊಡೆದು ನಾಶವಾಗಿವೆ. ಇದರ ಸಂಪೂರ್ಣ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ಹಿಂದೆ ವಿವರವಾದ ಸಮೀಕ್ಷೆ ಆಗಿ ವರದಿ ಸಲ್ಲಿಸುವುದು ತಡವಾಗುತ್ತಿತು. ಸಮೀಕ್ಷೆಯಾದ 2-3 ತಿಂಗಳಲ್ಲಿ ಪರಿಹಾರ ನೀಡಲಾಗುತ್ತಿತ್ತು. ಈಗ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದರ್ಶಿಯವರಿಗೆ ಪತ್ರವನ್ನು ಬರೆದಿದ್ದು, ದಿನನಿತ್ಯದ ಸಮೀಕ್ಷೆಯ ವರದಿ ಆಧರಿಸಿ, ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಆದ ಕೂಡಲೇ 24 ಗಂಟೆಯಲ್ಲಿ ಪರಿಹಾರ ನೀಡಲು ಕೋರಿದೆ ಎಂದರು.

ಸಮಗ್ರ ವರದಿ ಬಂದ ನಂತರ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ದಾವಣಗೆರೆಯಲ್ಲಿ ಕಣ್ಣಳತೆ(eyesight) ಸಮೀಕ್ಷೆಯಲ್ಲಿ 9800 ಹೆಕ್ಟೇರ್ ಕೃಷಿ ಬೆಳೆ, 2147 ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈ ಬಗ್ಗೆಯೂ ಸಮೀಕ್ಷೆ ಮಾಡಲು ತಿಳಿಸಲಾಗಿದೆ ಎಂದರು.

ಭ್ರಷ್ಟಾಚಾರ
ಎ.ಸಿ.ಬಿಗೆ ಮುಕ್ತವಾದ ಸ್ವಾತಂತ್ರ್ಯ ನೀಡಿರುವುದರಿಂದ ದೊಡ್ಡ ಪ್ರಮಾಣದ ದಾಳಿಯಾಗಿದೆ. ಭ್ರಷ್ಟರನ್ನು ಬಯಲಿಗೆಳೆದು ಶಿಕ್ಷೆಗೊಳಪಡಿಸಲಾಗುವುದು. ವ್ಯವಸ್ಥೆಯ ಶುದ್ದೀಕರಣ ಮಾಡುವುದು ನಮ್ಮ ಉದ್ದೇಶವಾಗಿದ್ದು, ದಾಳಿಯಿಂದ ಈ ಕೆಲಸ ಪ್ರಾರಂಭವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com