ವಿಧಾನ ಪರಿಷತ್ ಚುನಾವಣೆ: ಕಣದಲ್ಲಿ 91 ಅಭ್ಯರ್ಥಿಗಳು; ಹೆಬ್ಬಾಳ್ಕರ್ ಸಹೋದರನನ್ನು ಸೋಲಿಸುವುದೇ ಗುರಿ- ಜಾರಕಿಹೊಳಿ

ಸ್ಥಳೀಯ ಸಂಸ್ಥೆಗಳಿಂದ  ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ  ನಾಮಪತ್ರ ವಾಪಸಾತಿ ಪ್ರಕ್ರಿಯೆ ಶುಕ್ರವಾರ ಮುಗಿದಿದ್ದು, ಅಂತಿಮವಾಗಿ 91 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ  ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ  ನಾಮಪತ್ರ ವಾಪಸಾತಿ ಪ್ರಕ್ರಿಯೆ ಶುಕ್ರವಾರ ಮುಗಿದಿದ್ದು, ಅಂತಿಮವಾಗಿ 91 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರಿಂದಾಗಿ ಇನ್ನು ಪ್ರಚಾರದ ಭರಾಟೆ ಆರಂಭವಾಗಲಿದೆ.

ಶುಕ್ರವಾರ ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಕೊನೆಯ ದಿನವಾಗಿದ್ದು, 121ಮಂದಿಯಲ್ಲಿ 20 ಮಂದಿ ನಾಮಪತ್ರ ವಾಪಸ್‌ ಪಡೆದಿದ್ದಾರೆ.

ಕೊಡಗು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್‌ ತಮ್ಮ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ವಾಪಸ್‌ ಕರೆಸಿಕೊಂಡಿದ್ದು ಅಚ್ಚರಿಯ ಬೆಳವಣಿಗೆಯಾಗಿದೆ. ಇನ್ನುಳಿದಂತೆ ನಾಮಪತ್ರಗಳನ್ನು ವಾಪಸ್‌ ಪಡೆದವರ ಪೈಕಿ 19 ಅಭ್ಯರ್ಥಿಗಳು ಪಕ್ಷೇತರರಾಗಿದ್ದಾರೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಇತರರು ಸೇರಿದಂತೆ 91 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ. ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಜೆಡಿಎಸ್‌ 6 ಕ್ಷೇತ್ರದಲ್ಲಿ ಮಾತ್ರ ಕಣಕ್ಕಿಳಿದಿದೆ.

ಬೀದರ್‌, ಕಲಬುರಗಿ,ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಕ್ಷಿಣಕನ್ನಡದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಅತಿ ಹೆಚ್ಚು ಧಾರವಾಡದಲ್ಲಿ 10 ಮಂದಿ ಸೆಣಸಾಟಕ್ಕೆ ಸಿದ್ಧರಾಗಿದ್ದಾರೆ.

ಮಂಗಳೂರಿನಲ್ಲಿ ಎಸ್‌ಡಿಪಿಐ ಪೈಪೋಟಿಗೆ ಇಳಿದಿರುವುದು ವಿಶೇಷವಾಗಿದೆ. ಬಿಜೆಪಿಗೆ ಬೆಳಗಾವಿಯಲ್ಲಿ ಲಖನ್‌ ಸ್ಪರ್ಧಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೋಳಿ ಸೋಲಿಸುವುದೇ ನಮ್ಮ ಗುರಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಧಾರವಾಡದಲ್ಲಿ ಪಕ್ಷದ ಬಂಡಾಯ ಅಭ್ಯರ್ಥಿ ಕಣದಲ್ಲಿರುವುದು ಆತಂಕ ಹೆಚ್ಚಿಸಿದೆ.

ಕೊಡಗು ಚುನಾವಣಾ ಕಣದಿಂದ ಜೆಡಿಎಸ್‌ ಅಭ್ಯರ್ಥಿ ಇಸಾಖ್‌ ಖಾನ್‌ ಹಿಂದಕ್ಕೆ ಸರಿದಿದ್ದು, ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹೋರಾಟ ನಡೆಯಲಿದೆ.  ಜೆಡಿಎಸ್‌ ನಾಮಪತ್ರ ಹಿಂತೆಗೆತದ ಕಾರಣ ಜಿಲ್ಲೆಯಿಂದ ಬಿಜೆಪಿಯ ಸುಜಾ ಕುಶಾಲಪ್ಪ ಹಾಗೂ ಕಾಂಗ್ರೆಸ್‌ನಿಂದ ಡಾ. ಮಂಥರ್‌ಗೌಡ ಕಣದಲ್ಲಿ ಉಳಿದಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರು ಎಸ್‌ಡಿಪಿಐನ ಇಸ್ಮಾಯಿಲ್ ಶಾಫಿ ಕೆ ಸೇರಿದಂತೆ ಮೂವರು ಮಾತ್ರ ಕಣದಲ್ಲಿದ್ದಾರೆ. ಅದೇ ರೀತಿ ಧಾರವಾಡದಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಕಿರಿಯ ಸಹೋದರ ಪ್ರದೀಪ್ ಶೆಟ್ಟರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್ ನ ಸಲೀಂ ಅಹಮದ್ ಗೆಲುವು ಸುಲಭವಾಗಿದೆ.

ವಿಜಯಪುರ-ಬಾಗಲಕೋಟೆ ಉಭಯ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಪ್ರಹ್ಲಾದ ಹನುಮಂತಪ್ಪ ಪೂಜಾರಿ ಮತ್ತು ಮಾಜಿ ಸಚಿವ ಎಂಬಿ ಪಾಟೀಲ್ ಅವರ ಕಿರಿಯ ಸಹೋದರ ಕಾಂಗ್ರೆಸ್‌ನ ಸುನೀಲಗೌಡ ಬಸನಗೌಡ ಪಾಟೀಲ್ ಕಣದಲ್ಲಿದ್ದಾರೆ. ಆರು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com