ಡಿಸೆಂಬರ್ 13 ರಿಂದ ವಿಧಾನಸಭೆ ಚಳಿಗಾಲದ ಅಧಿವೇಶನ: ಶಾಸಕರು, ಸಚಿವಾಲಯ ಸಿಬ್ಬಂದಿಗೆ ಒಮಿಕ್ರಾನ್ ವೈರಸ್ ಚಿಂತೆ
ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ವಿಧಾನಸಭೆ ಅಧಿವೇಶನ ಸಂಬಂಧ ಸಾಕಷ್ಟು ಶಾಸಕರು ಮತ್ತು ವಿಧಾನ ಸೌಧ ಸಿಬ್ಬಂದಿ ಹೊಸ ವೈರಸ್ ಓಮಿಕ್ರಾನ್ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಗಾಜಿನ ಪಾರ್ಟಿಶಿಯನ್ ಮತ್ತು ಅತ್ಯುತ್ತಮ ವೈದಕೀಯ ಸೇವೆಗಳಿದ್ದರೂ ಎಲ್ಲರಿಗೂ ಸರಿಯಾಗ ವಸತಿ ಸೌಕರ್ಯಗಳಿಲ್ಲ ಎಂದು ಕೆಲವು ಸಿಬ್ಬಂದಿ ಆರೋಪಿಸಿದ್ದಾರೆ. ಡಿಸೆಂಬರ್ 13 ರಿಂದ 24ರ ವರೆಗೆ ಅಧಿವೇಶನ ನಡೆಯಲಿದೆ.
ವಿಧಾನಸೌಧದ ತಂಡ ಬುಧವಾರ ಬೆಳಗಾವಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪರಿಷತ್ ಸಭಾಪತಿ ಹೊರಟ್ಟಿ ಅವರಿಗೆ ಮಾಹಿತಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕರು ಮತ್ತು ಸಿಬ್ಬಂದಿ ಬೆಳಗಾವಿಗೆ ರೈಲಿನಲ್ಲಿ ಮತ್ತು ಬಸ್ ನಲ್ಲಿ ಪ್ರಯಾಣಿಸಲಿದ್ದಾರೆ. ಯಾವುದೇ ವೈದ್ಯಕೀಯ ಸೌಲಭ್ಯ ಪಡೆಯಲು ಸುವರ್ಣ ಸೌಧದಿಂದ 15 ಕಿಮೀ ಅಂತರ ಇರುತ್ತದೆ.
"ನಾವು ಕ್ಯಾಬಿನೆಟ್ ಆದೇಶಗಳನ್ನು ಪಾಲಿಸಲು ಬದ್ಧರಾಗಿದ್ದೇವೆ, ಆದರೂ, ಆರೋಗ್ಯದ ಬಗ್ಗೆ ಕಳವಳವಿದೆ, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಸಂಬಂಧಪಟ್ಟವರಿಗೆತಿಳಿಸುತ್ತೇನೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
"ಸರ್ಕಾರದ ನಿರ್ಧಾರವೇ ಅಂತಿಮವಾಗಿದೆ, ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಅವಲಂಬಿಸಿ ನಂತರ ಸರಿಯಾದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನನಗೆ ವಿಶ್ವಾಸವಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಸ್ಪೀಕರ್ ಗುರುವಾರ ಬೆಳಗಾವಿಗೆ ಖುದ್ದು ಭೇಟಿ ನೀಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಭೇಟಿ ಮಾಡಲಿದ್ದಾರೆ.
ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಸುವರ್ಣ ವಿಧಾನಸೌಧದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ವಿಧಾನಮಂಡಲ ಅಧಿವೇಶನದ ಸಿದ್ಧತೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಸ್ಪೀಕರ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರು ಮತ್ತು ಪರಿಷತ್ತಿನ ಅಧ್ಯಕ್ಷರು ಉತ್ತರ ಕರ್ನಾಟಕದವರಾಗಿದ್ದು, ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂದು ಹಲವರು ಹೇಳಿದ್ದರು, ಆದರೆ ಅಂದು ಒಮಿಕ್ರಾನ್ ವೈರಸ್ ಇರಲಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ