ಸಿಂದಗಿ-ಹಾನಗಲ್ ಉಪಚುನಾವಣೆಗೆ ಅಭ್ಯರ್ಥಿಗಳ ಶಿಫಾರಸು: ರೇವತಿ ಉದಾಸಿ ಪರ ಬೊಮ್ಮಾಯಿ- ಬಿಎಸ್ ವೈ ಒಲವು!

ಅಕ್ಟೋಬರ್ 30 ರಂದು ನಡೆಯುವ ಸಿಂದಗಿ-ಹಾನಗಲ್ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ನಾಯಕರಿಗೆ ರವಾನಿಸಲು ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ನಗರದ ಜೆಪಿ ಭವನದಲ್ಲಿ ನಡೆಯಿತು.
ಶಿವಕುಮಾರ್ ಉದಾಸಿ ಪತ್ನಿ ರೇವತಿ
ಶಿವಕುಮಾರ್ ಉದಾಸಿ ಪತ್ನಿ ರೇವತಿ

ಬೆಂಗಳೂರು: ಅಕ್ಟೋಬರ್ 30 ರಂದು ನಡೆಯುವ ಸಿಂದಗಿ-ಹಾನಗಲ್ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ನಾಯಕರಿಗೆ ರವಾನಿಸಲು ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ನಗರದ ಜೆಪಿ ಭವನದಲ್ಲಿ ನಡೆಯಿತು.

ಉಪ ಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದಿಂದ ತಲಾ ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ನಿರ್ಧರಿಸಿದೆ. 

ಈ ಪೈಕಿ, ಸಿಂದಗಿ ಕ್ಷೇತ್ರಕ್ಕೆ ರಮೇಶ ಭೂಸನೂರ ಮತ್ತು ಹಾನಗಲ್‌ ಕ್ಷೇತ್ರಕ್ಕೆ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಹೆಸರು ಮುಂಚೂಣಿಯಲ್ಲಿವೆ. ರೇವತಿ ಉದಾಸಿ ಅವರನ್ನು ಕಣಕ್ಕಿಳಿಸಲು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದಾಸಿ ಅವರ ಅವಧಿಯಲ್ಲಿ ಕ್ಷೇತ್ರ ಉತ್ತಮ ಅಭಿವೃದ್ದಿ ಕಂಡಿದೆ. ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಹಾನಗಲ್ ಕ್ಷೇತ್ರವಿರುವುದು ಬೊಮ್ಮಾಯಿ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.ಹಾನಗಲ್ ಕ್ಷೇತ್ರಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಮತ್ತು ಸಿಂದಗಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಹಾನಗಲ್‌ ಕ್ಷೇತ್ರಕ್ಕೆ ರೇವತಿ ಉದಾಸಿ, ಪಕ್ಷದ ಮುಖಂಡ ಕಲ್ಯಾಣ ಕುಮಾರ್‌ ಶೆಟ್ಟರ್‌ ಮತ್ತು ವಿಧಾನ ಪರಿಷತ್‌ ಮಾಜಿ ಸದಸ್ಯ ಶಿವರಾಜ ಸಜ್ಜನ ಅವರ ಹೆಸರುಗಳನ್ನು ಶಿಫಾರಸು ಮಾಡಲು ಪ್ರಮುಖರ ಸಮಿತಿ ನಿರ್ಧರಿಸಿದೆ. ಹಾನಗಲ್‌ ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳಿದ್ದು, ಶಿವಕುಮಾರ ಉದಾಸಿ ಹೆಸರೂ ಚರ್ಚೆಗೆ ಬಂದಿತ್ತು. ಆದರೆ, ಹಾಲಿ ಸಂಸದರಾಗಿರುವ
ಕಾರಣದಿಂದ ಅವರ ಬದಲು ಪತ್ನಿಯ ಹೆಸರನ್ನು ಶಿಫಾರಸು ಮಾಡುವ ನಿರ್ಣಯಕ್ಕೆ ಬರಲಾಯಿತು ಎಂದು ಗೊತ್ತಾಗಿದೆ.

ಸಿಂದಗಿ ಕ್ಷೇತ್ರಕ್ಕೆ ಹಿಂದಿನ ಚುನಾವಣೆಯ ಪರಾಜಿತ ಅಭ್ಯರ್ಥಿ ರಮೇಶ ಭೂಸನೂರ, ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರ ಸಂಬಂಧಿ ಸಂಗನಗೌಡ ಪಾಟೀಲ ಮತ್ತು ಬಿಜೆಪಿ ಮುಖಂಡ ಸಿದ್ದು ಬಿರಾದಾರ ಹೆಸರು ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಇನ್ನೂ ಕೆಲವು ಆಕಾಂಕ್ಷಿಗಳ ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದಿದ್ದವು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಮಹಾಂತೇಶ ಸೊಪ್ಪಿನ, ಆರೆಸ್ಸೆಸ್‌ ಮುಖಂಡ ರಾಜಶೇಖರ್‌ ಗೌಡ ಕಾಟೆಗೌಡರ್‌ ಹೆಸರುಗಳೂ ಪರಿಶೀಲನೆಗೆ ಬಂದಿದ್ದವು. ಆದರೆ, ಎರಡೂ ಕ್ಷೇತ್ರಕ್ಕೆ ತಲಾ ಮೂವರ ಹೆಸರನ್ನಷ್ಟೇ ಶಿಫಾರಸು ಮಾಡಲು ನಿರ್ಧರಿಸಲಾಯಿತು

ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಉಪಸ್ಥಿತಿಯಲ್ಲಿ ಭಾನುವಾರ ಪ್ರಮುಖರ ಸಮಿತಿ ಸಭೆ ನಡೆಯಿತು. ಎರಡೂ ಕ್ಷೇತ್ರಗಳಿಗೆ ತಲಾ ಮೂವರ ಹೆಸರನ್ನು ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂಬ ಮಾಹಿತಿ ಲಭಿಸಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಎರಡೂ ಕ್ಷೇತ್ರಗಳಿಗೆ ಹಲವರ ಹೆಸರುಗಳು ಪ್ರಸ್ತಾಪವಾಗಿವೆ. ಅವುಗಳಲ್ಲಿ ಮೂರ್ನಾಲ್ಕು ಹೆಸರುಗಳನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸು ಮಾಡುವ ಅಧಿಕಾರವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ನೀಡಲಾಗಿದೆ’ ಎಂದರು. ‘ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಪಕ್ಷದ ಆದ್ಯತೆ. ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗೆಲುವಿಗಾಗಿ ಸಂಘಟಿತ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com