ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಕಿತ್ತೆಸೆದರು: ಹೆಚ್.ಡಿ. ಕುಮಾರಸ್ವಾಮಿ

ಈ ಸರ್ಕಾರದ ಅವಧಿಯೊಳಗೆ ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಳ್ಳಲು ಕುಮಾರಸ್ವಾಮಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಅವರ ಪಕ್ಷದಲ್ಲಿದ್ದ 23 ಮಂತ್ರಿಗಳನ್ನು ಬೀದಿಗೆ ತಂದು ನಿಲ್ಲಿಸಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಮೈಸೂರು: ಈ ಸರ್ಕಾರದ ಅವಧಿಯೊಳಗೆ ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಳ್ಳಲು ಕುಮಾರಸ್ವಾಮಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಅವರ ಪಕ್ಷದಲ್ಲಿದ್ದ 23 ಮಂತ್ರಿಗಳನ್ನು ಬೀದಿಗೆ ತಂದು ನಿಲ್ಲಿಸಿದರು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಏಕವಚನದಲ್ಲಿ ಬಹಿರಂಗವಾಗಿ ಗಂಭೀರವಾದ ಆರೋಪ ಮಾಡಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟ ಬಳಿ ಸುದ್ದಿಗಾರರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದರೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಗೊತ್ತಾಗಿ ಕಾಂಗ್ರೆಸ್ ಗೆ ಹೋದರು. ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿದ್ದು ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಂಡು ಕೂಟದ ಕಾರಿನಲ್ಲಿ ತಿರುಗಾಡಲು, ಅದಕ್ಕಾಗಿ 23 ಮಂತ್ರಿಗಳನ್ನು ಬೀದಿಗೆ ತಂದು ಅವರ ಹೊಟ್ಟೆ ಮೇಲೆ ಹೊಡೆದನು ಎಂದು ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡಿದರು.

ನಮ್ಮ ಪಕ್ಷ ಜೆಡಿಎಸ್ ಬಗ್ಗೆ, ನನ್ನ ಬಗ್ಗೆ ಪದೇ ಪದೇ ಕೆಣಕಲು ಬರಬೇಡಿ, ಪುಟಗೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮೈತ್ರಿ ಸರ್ಕಾರವನ್ನು ಕಿತ್ತೆಸೆದವರು ಇವತ್ತು ನನ್ನ ಬಗ್ಗೆ ಮಾತನಾಡಲು ಏನು ನೈತಿಕ ಹಕ್ಕು ನಿಮಗಿದೆ ಎಂದು ಕೇಳಿದರು.

ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದರಲ್ಲಿ ನಿಮ್ಮ ಪಾತ್ರ ಏನಿದೆ ಎಂಬುದು ನನಗೆ ಗೊತ್ತಿದೆ. 23 ಮಂದಿ ಕಾಂಗ್ರೆಸ್ ಮಂತ್ರಿಗಳ ಹೊಟ್ಟೆ ಮೇಲೆ ಹೊಡೆದು ಅವರನ್ನು ಮನೆಗೆ ಕಳುಹಿಸಿದರು. ವಿರೋಧ ಪಕ್ಷದ ನಾಯಕ ಸ್ಥಾನ ಗಿಟ್ಟಿಸಿಕೊಳ್ಳಲು ಕ್ಷುಲ್ಲಕ ರಾಜಕಾರಣ ಮಾಡಿ ಇವತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಮಾಡಿದರು.

ಇವತ್ತು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನ ಕೊಡುಗೆಯೇ ಕಾರಣ ಎಂಬುದು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದರು. 

ಐಟಿ ದಾಳಿಗೆ ಸಿದ್ದರಾಮಯ್ಯನೇ ಕಾರಣ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮೇಲಿನ ಐಟಿ ದಾಳಿ ವಿಚಾರವಾಗಿ ಕೂಡ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ, ಐಟಿ ದಾಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಐಟಿ ರೇಡ್‌ಗೆ ಕಾರಣ. ಸಿದ್ದರಾಮಯ್ಯ ಪವರ್‌ಗಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಸಹಾ ಅದರ ಭಾಗವಾಗಿದೆ. ಹೇಗಾದರೂ ಸರಿ ಸಿದ್ದರಾಮಯ್ಯಗೆ ಅಧಿಕಾರ ಬೇಕು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಭೇಟಿ ಬಗ್ಗೆ ಕೇಂದ್ರಕ್ಕೂ ಮಾಹಿತಿ ಸಿಕ್ಕಿದೆ. ಯಡಿಯೂರಪ್ಪ ಅವರನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ ಮಾಡಲಾಗಿದೆ. ಐಟಿ ದಾಳಿ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶ ಇದೆ. ಇದರ ಬಗ್ಗೆ ಅನುಮಾನ ಇಲ್ಲ ಎಂದರು. 

ಇನ್ನು ಮಂಡ್ಯದಲ್ಲಿ ಜೆಡಿಎಸ್ ದುರ್ಬಲವಾಗಿದೆ ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘ ಸೇರಿಕೊಂಡು ಮಂಡ್ಯದಲ್ಲಿ ಕುತಂತ್ರದಿಂದ ನಿಖಿಲ್‌ರನ್ನು ಸೋಲಿಸಿದರು. ಮಹಾಭಾರತದಲ್ಲಿ ಕೌರವರಂತೆ ಚಕ್ರವ್ಯೂಹವನ್ನು ರಚಿಸಿದರು. ಆ ಚಕ್ರವ್ಯೂಹದಲ್ಲಿ ನಿಖಿಲ್‌ರನ್ನು ಸಿಲುಕಿಸಿ ಸೋಲಿಸಿದ್ದರು. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ. ಸಿದ್ದರಾಮಯ್ಯನವರು ಸ್ವತಃ ಬೆನ್ನು ತಟ್ಟಿಕೊಳ್ಳುವುದು ಬೇಡ ಎಂದು ಕುಟುಕಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com