ಬಡಪಾಯಿ ಸಲೀಂ ಮೇಲೆ ʼಕಿರಾತಕ ರಾಜಕಾರಣʼ; ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್!
‘ಸಿದ್ದಕಲೆ’, ’ಸಿದ್ದಸೂತ್ರ’, ’ಸಿದ್ದಹಸ್ತ ಶೂರ’ ಎಂಬಿತ್ಯಾದಿ ಪದಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಿಡಿಕಾರಿದ್ದಾರೆ.
Published: 16th October 2021 11:34 AM | Last Updated: 16th October 2021 12:35 PM | A+A A-

ಬೆಂಗಳೂರು: ‘ಸಿದ್ದಕಲೆ’, ’ಸಿದ್ದಸೂತ್ರ’, ’ಸಿದ್ದಹಸ್ತ ಶೂರ’ ಎಂಬಿತ್ಯಾದಿ ಪದಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ‘ಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ‘ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ,‘ ಎಂದು ಅವರು ಹೆಸರು ಹೇಳದೇ ಆರೋಪಿಸಿದ್ದಾರೆ.
‘ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು 'ಅಡ್ಡದಾರಿ' ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ,‘ ಎಂದು ಅವರು ಹೇಳಿದ್ದಾರೆ. ‘ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ʼಸಿದ್ದಹಸ್ತ ಸೂತ್ರಧಾರಿʼಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ʼನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ,‘ ಎಂದಿರುವ ಅವರು ಒಂದೊಂದೇ ಉದಾಹರಣೆಗಳನ್ನೂ ನೀಡಿದ್ದಾರೆ.
ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ. 11/12
— H D Kumaraswamy (@hd_kumaraswamy) October 16, 2021
‘2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ʼಸಿದ್ದಹಸ್ತರ ಸಿದ್ದಸೂತ್ರʼ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ. ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು?’ ಎಂದು ಅವರು ಕೇಳಿದ್ದಾರೆ.
‘ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್ʼಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ. ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ,‘ ಎಂದು ವಿವರಿಸಿದ್ದಾರೆ. ‘ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ʼರಸಸ್ವಾದʼ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ?’ ಎಂದು ಹೇಳಿದ್ದಾರೆ.
‘ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ. ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ,‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.