'ಮನೆಮುರುಕ' ಸಿದ್ದರಾಮಯ್ಯನವರು ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ: ಬಿಜೆಪಿ ಸರಣಿ ಟ್ವೀಟ್ ವಾರ್ 

''ಮೋದಿ ವಿರುದ್ಧ ಮಾತನಾಡಿದರೆ ಇಂದು ದೇಶದ್ರೋಹವೆಂದು ಭಾವಿಸಲಾಗುತ್ತಿದೆ, ಯಾವನ್ರಿ ಇವನು ಪ್ರಧಾನ ಮಂತ್ರಿ'' ಎಂದು ಹಾನಗಲ್ ನಲ್ಲಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಭಾಷಣ ಮಾಡುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ ಏಕವಚನ ಪ್ರಯೋಗಕ್ಕೆ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ-ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ-ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬೆಂಗಳೂರು: ''ಮೋದಿ ವಿರುದ್ಧ ಮಾತನಾಡಿದರೆ ಇಂದು ದೇಶದ್ರೋಹವೆಂದು ಭಾವಿಸಲಾಗುತ್ತಿದೆ, ಯಾವನ್ರಿ ಇವನು ಪ್ರಧಾನ ಮಂತ್ರಿ'' ಎಂದು ಹಾನಗಲ್ ನಲ್ಲಿ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಭಾಷಣ ಮಾಡುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ ಏಕವಚನ ಪ್ರಯೋಗಕ್ಕೆ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ನಿರಂತರ 20 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ. ನಿಮ್ಮ ದುರಹಂಕಾರ, ದಾರ್ಷ್ಟ್ಯಕ್ಕಾಗಿ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಿಮ್ಮ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ ಎಂದು ಪ್ರಶ್ನಿಸಿದೆ.

ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಬುರುಡೆರಾಮಯ್ಯ ಎಂದು ಪ್ರಶ್ನಿಸಿದೆ.

ನಾನು ಹಳ್ಳಿಯವನು, ಮಾತಾಡುವ ಶೈಲಿಯೇ ಹೀಗೆ ಎನ್ನುವ ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವು ಇಲ್ಲವೇ, ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ 'ಮನೆಮುರುಕರು' ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. 

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಹ ಇದೇ ಸಂದರ್ಭದಲ್ಲಿ ಬಿಜೆಪಿ ವ್ಯಂಗ್ಯವಾಡಿದ್ದು, ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ "ಹೆಬ್ಬೆಟ್ಟು" ಗಿರಾಕಿ ಕನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯನವರೇ, ಆತನ ಯೋಗ್ಯತೆ, ಅರ್ಹತೆ ಏನು ಎಂದು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ಹೀಗೇ ಮಾತನಾಡುತ್ತೀರಾ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com