ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 120ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷವೂ ಬಾಕಿ ಇಲ್ಲ. ಈ ಸಂದರ್ಭದಲ್ಲಿ ಪ್ರಮುಖ ಪಕ್ಷಗಳು ತಮ್ಮದೇ ರೀತಿಯಲ್ಲಿ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಬಿಜೆಪಿಯಿದೆ.
Published: 01st September 2021 08:24 AM | Last Updated: 01st September 2021 08:47 AM | A+A A-

ಮೈಸೂರು ಮಹಾರಾಜರನ್ನು ಭೇಟಿ ಮಾಡಿ ಸನ್ಮಾನಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವ ಎಸ್ ಟಿ ಸೋಮಶೇಖರ್ ಇದ್ದಾರೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷವೂ ಬಾಕಿ ಇಲ್ಲ. ಈ ಸಂದರ್ಭದಲ್ಲಿ ಪ್ರಮುಖ ಪಕ್ಷಗಳು ತಮ್ಮದೇ ರೀತಿಯಲ್ಲಿ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಬಿಜೆಪಿಯಿದೆ.
ಕರ್ನಾಟಕ ರಾಜ್ಯದ ಬಿಜೆಪಿ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಪಡೆಯುವ ವಿಶ್ವಾಸ ನಮಗಿದೆ. 120ಕ್ಕೂ ಅಧಿಕ ವಿಧಾನಸಭಾ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಈ ಬಾರಿ ಲಿಂಗಾಯತ ಸಮುದಾಯದ ಪ್ರಬಲ ಮುಖಂಡ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿಲ್ಲ. ಹಾಗಾದರೆ ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರನ್ನೆಂದು ಬಿಜೆಪಿ ಘೋಷಿಸುತ್ತದೆ ಎಂಬ ಕುತೂಹಲ ದೊಡ್ಡ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಇದೆ.
ತಳಮಟ್ಟದಿಂದ ಪಕ್ಷ ಸಂಘಟಿಸುವುದಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ ಹೇಳಿದ್ದರು. ಈ ಬಗ್ಗೆ ವಿಶ್ಲೇಷಣೆ ನೀಡಿರುವ ರಾಜಕೀಯ ವಿಶ್ಲೇಷಕ ಬಿ ಎಸ್ ಗುರುಮೂರ್ತಿ, ಮುಂದಿನ 18 ತಿಂಗಳು ಯಡಿಯೂರಪ್ಪನವರು ಪಕ್ಷದಲ್ಲಿ ಯಾವ ಪಾತ್ರ ಹೇಗೆ ನಿಭಾಯಿಸುತ್ತಾರೆ ಎಂಬ ಗೊಂದಲದಲ್ಲಿ ಪಕ್ಷವಿದೆ. ಅದರ ಜೊತೆಗೆ ಶೇಕಡಾ 40ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮೂರಕ್ಕಿಂತಲೂ ಹೆಚ್ಚು ಬಾರಿ ಶಾಸಕರಾಗಿ ಗೆದ್ದಿದ್ದು ಅಧಿಕಾರ ವಿರೋಧಿ ಸ್ಥಿತಿ ಎದುರಿಸುವ ಸಾಧ್ಯತೆಯಿದೆ ಎನ್ನುತ್ತಾರೆ.
ನಿನ್ನೆ ಹೇಳಿಕೆ ನೀಡಿರುವ ಅರುಣ್ ಸಿಂಗ್ ಅವರು ಯಡಿಯೂರಪ್ಪನವರು ಅನುಭವಿ ನಾಯಕರಾಗಿದ್ದು ಅವರ ಅನುಭವಗಳನ್ನು ಪಕ್ಷ ಬಳಸಿಕೊಳ್ಳಲಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿರುವ ಅವರಿಗೆ ಜನರ ಮತ್ತು ಪಕ್ಷದ ನಾಡಿಮಿಡಿತ ಗೊತ್ತಿರುತ್ತದೆ. ಅವರು ರಾಜ್ಯದಲ್ಲಿ ಅತಿದೊಡ್ಡ ರಾಜಕೀಯ ನಾಯಕರಾಗಿದ್ದು ಅವರ ಅನುಭವಗಳನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರದ ಸಿಂದಗಿ ವಿಧಾನಸಭಾ ಸ್ಥಾನಗಳಿಗೆ ಮುಂಬರುವ ಉಪಚುನಾವಣೆಯಲ್ಲಿ, ಪಕ್ಷದ ಕಾರ್ಯಕಾರರು ಈಗಾಗಲೇ ತಳಮಟ್ಟದಲ್ಲಿ ಕೆಲಸವನ್ನು ಆರಂಭಿಸಿದ್ದು ಬಿಜೆಪಿ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿದ್ದಾರೆ.
ರಾಯಚೂರಿನ ಮಸ್ಕಿಯಲ್ಲಿ 30 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋತಿರುವ ಬಗ್ಗೆ ಕೇಳಿದಾಗ ಅದು ಅಧಿಕಾರ ವಿರೋಧಿ ಕಾರಣ. ಬಿಜೆಪಿಯಲ್ಲಿದ್ದ ಅಭ್ಯರ್ಥಿಯು ಹಿಂದಿನ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ಸೋತಿದ್ದರು ಎಂದು ಹೇಳಿ ಬದಲಿಗೆ ಬಸವಕಲ್ಯಾಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಿದ್ದಾರಲ್ಲವೇ ಎಂದು ಕೇಳಿದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಹೇಗೆ ಸಿದ್ಧರಾಗುತ್ತಿದ್ದೀರಿ ಎಂದು ಕೇಳಿದಾಗ ನಾವು ಪಕ್ಷದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಮತ್ತು ಮಂಡಲ್ ಸಮಿತಿಗಳು ಮತ್ತು ಮೋರ್ಚಾಗಳನ್ನು ಬಲಪಡಿಸುತ್ತಿದ್ದೇವೆ ಎಂದರು.