ಇಂಧನ ಬೆಲೆ ಏರಿಕೆಗೆ ಕಾಂಗ್ರೆಸ್ ದೂರುವುದು ಕುಂಟುನೆಪ, ಬಿಜೆಪಿಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರ ಖರೀದಿ: ಸಿದ್ದರಾಮಯ್ಯ
ಇಂಧನ ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರವನ್ನು ದೂರುವುದು ಕುಂಟುನೆಪವಷ್ಟೆ. ಸತ್ಯಕ್ಕೆ ದೂರವಾದ ಮಾತು ಎಂದು ವಿಧಾನಸೌಧದಲ್ಲಿ ಸೋಮವಾರ ಕಲಾಪ ಆರಂಭಕ್ಕೆ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
Published: 13th September 2021 01:15 PM | Last Updated: 13th September 2021 02:19 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಇಂಧನ ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರ್ಕಾರವನ್ನು ದೂರುವುದು ಕುಂಟುನೆಪವಷ್ಟೆ. ಸತ್ಯಕ್ಕೆ ದೂರವಾದ ಮಾತು ಎಂದು ವಿಧಾನಸೌಧದಲ್ಲಿ ಸೋಮವಾರ ಕಲಾಪ ಆರಂಭಕ್ಕೆ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇಂದು ಎತ್ತಿನ ಗಾಡಿ ಚಲೋ ಹಮ್ಮಿಕೊಂಡಿದ್ದರು. ಎತ್ತಿನ ಗಾಡಿಯಲ್ಲಿಯೇ ವಿಧಾನಸೌಧದ ಆವರಣದೊಳಗೆ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನೆಲ್ಲಾ ವೈಫಲ್ಯಕ್ಕೆ ಹಿಂದಿನ ಯುಪಿಎ ಸರ್ಕಾರವನ್ನೇ ಬೆರಳು ಮಾಡಿ ತೋರಿಸುತ್ತಿರುವುದು ಅದರ ವೈಫಲ್ಯವನ್ನು ಮುಚ್ಚಿಹಾಕುವ ತಂತ್ರಗಾರಿಕೆಯಷ್ಟೆ. ಅದೊಂದು ಕುಂಟುನೆಪ ಮಾತ್ರ. ಅಂದು 1 ಲಕ್ಷದ 30 ಸಾವಿರ ಸಾಲವಿತ್ತು. ಇಂದು ಕೇಂದ್ರ ಸರ್ಕಾರ ಸುಂಕ ತೆರಿಗೆ ಮೂಲಕ 24 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. 1 ಲಕ್ಷದ 30 ಸಾವಿರ ಕೋಟಿ ರೂಪಾಯಿ ಎಲ್ಲಿ, 24 ಲಕ್ಷ ಕೋಟಿ ರೂಪಾಯಿ ಎಲ್ಲಿ, ಬಿಜೆಪಿ ನಾಯಕರದ್ದು ಎಲ್ಲಿಂದೆಲ್ಲಿಯ ಹೋಲಿಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡಿದೆ. ಅಲ್ಲದೆ ಹಣ ನೀಡಿ ಪಕ್ಷಕ್ಕೆ ಕರೆಸಿಕೊಂಡಿದೆ, ಅದಕ್ಕೆ ಇತ್ತೀಚೆಗೆ ಶ್ರೀಮಂತ್ ಪಾಟೀಲ್ ಅವರು ನೀಡಿರುವ ಹೇಳಿಕೆಯೇ ಸಾಕ್ಷಿ. ಬಿಜೆಪಿ ಕಡೆಯಿಂದ ಶ್ರೀಮಂತ್ ಪಾಟೀಲ್ ಗೆ 25ರಿಂದ 35 ಕೋಟಿ ರೂಪಾಯಿ ಹೋಗಿದೆ, ಅವರು ಸರಿಯಾಗಿಯೇ ಹೇಳಿದ್ದಾರೆ ಎಂದು ಕೂಡ ಸಿದ್ದರಾಮಯ್ಯ ಟೀಕಿಸಿದರು.
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿಂದು ಎತ್ತಿನಗಾಡಿ ಚಲೋ ಹಮ್ಮಿಕೊಂಡಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದವರೆಗೂ ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿದರು.
To mark protest Congress leaders led by Siddaramaiah & DK Shivakumar came to Vidhana Soudha, in bullock cart on 1st day of monsoon sesson @KPCCPresident @siddaramaiah @santwana99 @ramupatil_TNIE @XpressBengaluru @NewIndianXpress @bansykalappa pic.twitter.com/9pkMn2txO0
— Nagaraja Gadekal (@gadekal2020) September 13, 2021