ಸಂಸದರಿಂದ ಶಾಸಕರ ಅಧಿಕಾರ ಮೊಟಕುಗೊಳಿಸುವ ಯತ್ನ: ಡಿಕೆ ಸುರೇಶ್ ವಿರುದ್ಧ ಕುಮಾರಸ್ವಾಮಿ ಗರಂ!
ರಾಮನಗರ-ಚನ್ನಪಟ್ಟಣ ಕ್ಷೇತ್ರಗಳ ಶಾಸಕರಿಗೆ ಮಾಹಿತಿ ನೀಡದೇ ಸಂಸದ ಡಿ.ಕೆ ಸುರೇಶ್ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ಜೆಡಿಎಸ್ ಶಾಸಕ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
Published: 21st September 2021 09:38 AM | Last Updated: 21st September 2021 09:38 AM | A+A A-

ಎಚ್.ಡಿ ಕುಮಾರಸ್ವಾಮಿ ಮತ್ತು ಸುರೇಶ್
ಬೆಂಗಳೂರು: ರಾಮನಗರ-ಚನ್ನಪಟ್ಟಣ ಕ್ಷೇತ್ರಗಳ ಶಾಸಕರಿಗೆ ಮಾಹಿತಿ ನೀಡದೇ ಸಂಸದ ಡಿ.ಕೆ ಸುರೇಶ್ ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ಜೆಡಿಎಸ್ ಶಾಸಕ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಮನಗರದಿಂದ ಅನಿತಾ ಮತ್ತು ಚನ್ನಪಟ್ಟಣ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದಾರೆ. ಶೂನ್ಯ ವೇಳೆಯಲ್ಲಿ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕುಮಾರಸ್ವಾಮಿ, ಸಂಸದರು ರಾಮನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಮೀಟಿಂಗ್ ಆಯೋಜಿಸಿದ್ದಾರೆ, ಆದರೆ ಚನ್ನಪಟ್ಟಣ ಮತ್ತು ರಾಮನಗರ ಶಾಸಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು
ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲು ಸಂಸದರಿಗೆ ಅಧಿಕಾರವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದ ನಂತರ ಸಭೆ ರದ್ದಾಗಿದೆ. ಆದರೆ ಮತ್ತೊಂದು ಸಭೆ ಸೋಮವಾರ ನಡೆದಿದೆ. ಇದು ಶಾಸಕರ ಅಧಿಕಾರವನ್ನು ಮೊಟಕುಗೊಳಿಸುವ ಯತ್ನ ಎಂದು ಹೇಳಿದ್ದಾರೆ.
ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಗಳನ್ನು ಮಾತ್ರ ಸಂಸದರು ನಡೆಸಬಹುದು, ಆದರೆ ಅವರು ಸ್ಥಳೀಯ ಶಾಸಕರನ್ನು ಆಹ್ವಾನಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು. ಸಭೆಯಲ್ಲಿ, ಸಂಸದರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾತ್ರ ಮಾತನಾಡಬಹುದು ಎಂದು ಅವರು ಹೇಳಿದರು.