

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಜಾತಿ ಗಣಿತದ ಮೊರೆ ಹೋಗುತ್ತಿದ್ದು, ಪಕ್ಷದ ಹೈಕಮಾಂಡ್ ಈ ಅಗತ್ಯವನ್ನು ಅರಿತುಕೊಂಡಂತಿದೆ.
2018ರಲ್ಲೇ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಹಿಂದುಳಿದ ಕೋಲಿ ಸಮುದಾಯದ ನಾಯಕ ಬಾಬುರಾವ್ ಚಿಂಚನಸೂರ್ ಅವರಿಗೆ ವಿಧಾನ ಪರಿಷತ್ ಉಪ ಚುನಾವಣೆ ಟಿಕೆಟ್ ನೀಡಿದೆ.
ಸಿ.ಎಂ.ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿ ಯಿಂದ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಿ ಸಮಾಜದ ಹಿರಿಯ ನಾಯಕರಾಗಿರುವ 71 ವರ್ಷದ ಬಾಬೂರಾವ್ ಚಿಂಚನಸೂರ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜವಳಿ ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿದ್ದರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಕಲಬುರಗಿಯ ಗುರುಮಿಟ್ಕಲ್ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದ್ಕೂರು ಅವರ ಎದುರು 2018 ರ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರು. ಆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾನು ಐದು ಬಾರಿ ಗೆಲುವು ಸಾಧಿಸಿದ್ದೆ. ಆ ಭಾಗದಲ್ಲಿ ನಮ್ಮ ಕೋಲಿ ಸಮಾಜ ಶೇ 45 ರಷ್ಟಿದೆ. ನನ್ನನ್ನು ಗುರುತಿಸಿ ಪಕ್ಷ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಯಾರು ಅಲ್ಲಾಡಿಸಲು ಆಗುವುದಿಲ್ಲ ಎಂದು ಚಿಂಚನಸೂರ್ ಹೇಳಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ತುಂಬ ಬಲಿಷ್ಠವಾಗಿದೆ. ಮುಂದಿನ ಬಾರಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಚಿಂಚನಸೂರ್, ಮುಂದೆ ಪ್ರಿಯಾಂಕ ಖರ್ಗೆ ಅವರ ಎದುರು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಅವರ ಕಥೆಯಲ್ಲಾ ಇನ್ನು ಮುಗಿಯಿತು. ಇನ್ನು ಮುಂದೆ ನೋಡುತ್ತಿರಿ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಲಿದೆ’ ಎಂದರು.
ಈ ಸಮುದಾಯಗಳ ಸದಸ್ಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟ ಎಂಬ ಭಾವನೆಯಿಂದ ಪಕ್ಷವು ಎಸ್‌ಸಿ-ಎಸ್‌ಟಿ-ಒಬಿಸಿ ಸಂಯೋಜನೆಯತ್ತ ಗಮನ ಹರಿಸಿದೆ. ಒಬಿಸಿಗಳನ್ನು ಓಲೈಸುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಎದುರಿಸಲು ಈ ನಿರ್ಧಾರ ಸಹಾಯವಾಗಲಿದೆ.
ಅಲ್ಪಸಂಖ್ಯಾತರು ಮತ್ತು ಕುರುಬರು ಸಿದ್ದರಾಮಯ್ಯಗೆ ಒಲವು ತೋರಬಹುದು, ಆದರೆ ದಲಿತರು ಮತ್ತು ಒಬಿಸಿಗಳ ಒಂದು ವಿಭಾಗ ಸೇರಿದಂತೆ ಇತರ ಸಮುದಾಯಗಳು ಅವರ ನಾಯಕತ್ವದಿಂದ ದೂರವಿದ್ದಾರೆ. ಅದಕ್ಕಾಗಿಯೇ ಅವರ ಬೆಂಬಲವನ್ನು ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
Advertisement