ನಾನು ಕಾಪಿ ಹೊಡೆದು ಪಾಸಾಗಿದ್ದೇನೆ, ಗೂಂಡಾಗಿರಿ ಮಾಡ್ತಿದ್ದೆ, ಜೈಲಿಗೂ ಹೋಗಿದ್ದೆ: ಸಚಿವ ಶ್ರೀರಾಮುಲು
ಬಳ್ಳಾರಿ: ನಾನು ನಿಮ್ಮಷ್ಟು ಬುದ್ಧಿವಂತ ಅಲ್ಲ. ಲಾಸ್ಟ್ ಬೆಂಚ್ ವಿದ್ಯಾರ್ಥಿ. ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಎಚ್ ಡಿ ಮಾಡಿದ್ದೇನೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ತಮ್ಮ ಕಾಲೇಜ್ ದಿನಗಳನ್ನು ಶನಿವಾರ ಮೆಲುಕು ಹಾಕಿದ್ದಾರೆ.
ಇಂದು ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಜಿ ಕಾಲೇಜಿನ ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ಮೊದಲು ನಾನೂ ಗೂಂಡಾಗಿರಿ ಮಾಡುತ್ತಿದ್ದೆ. ತುಂಬಾ ಜಗಳ ಮಾಡುತ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೂ ಹೋಗಿದ್ದೆ ಎಂದು ಹೇಳಿದ್ದಾರೆ.
ಕಾಲೇಜಿಗೆ ನಾನು ಜೀನ್ಸ್‌ಪ್ಯಾಂಟ್ ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡುತ್ತಿದ್ದರು. ನನಗೆ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಬಾರಿ ಬುದ್ಧಿವಂತನಲ್ಲ, ಲಾಸ್ಟ್ ಬೆಂಚ್ ಸ್ಟೂಡೆಂಟ್. ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ದರು. 5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ. ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದು ಈ ಸಂಘ ಎಂದಿದ್ದಾರೆ.
ಶಿಕ್ಷಕರು ಬಂದಾಗ ಲಾಸ್ಟ್ ಬೆಂಚ್ನಲ್ಲಿ ಕುಳಿತು ಅಂಗಿಸುತ್ತಿದ್ದೆವು. ಕನ್ನಡ ಬರಲ್ಲ, ತೆಲುಗು ಬರಲ್ಲ, ಇಂಗ್ಲಿಷ್ ಬರಲ್ಲ ಎಂದು ಹೇಳುತ್ತಿದ್ದರು. ನೀನು ಯಾವ ಶಾಲೆಯಲ್ಲಿ ಓದಿದ್ದು ಎಂದು ಶಿಕ್ಷಕರು ಕೇಳುತ್ತಿದ್ದರು ಎಂದು ಶ್ರೀರಾಮುಲು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ