ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಶ್ರೀನಿವಾಸ ಪ್ರಸಾದ್: ಪಕ್ಷ ಸೇರಲು ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದ: ವಿಶ್ವನಾಥ್

ನಾನು ಬಿಜೆಪಿ ಸೇರುವುದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದರು. ಅವರ ಅಪಾರ್ಟ್‌ಮೆಂಟ್‌ನಲ್ಲೇ ಮಾತುಕತೆ ನಡೆದಿತ್ತು ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌  ಹೊಸ ಬಾಂಬ್ ಸಿಡಿಸಿದ್ದಾರೆ.
ಎಚ್.ವಿಶ್ವನಾಥ್‌
ಎಚ್.ವಿಶ್ವನಾಥ್‌
Updated on

ಮೈಸೂರು: ನಾನು ಬಿಜೆಪಿ ಸೇರುವುದಕ್ಕಾಗಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನನಗೆ ದುಡ್ಡು ಕೊಡಲು ಬಂದಿದ್ದರು. ಅವರ ಅಪಾರ್ಟ್‌ಮೆಂಟ್‌ನಲ್ಲೇ ಮಾತುಕತೆ ನಡೆದಿತ್ತು ಎಂದು ವಿಧಾನಪರಿಷತ್‌ ಸದಸ್ಯ ಎ.ಎಚ್.ವಿಶ್ವನಾಥ್‌  ಹೊಸ ಬಾಂಬ್ ಸಿಡಿಸಿದ್ದಾರೆ.

ಶೀಘ್ರದಲ್ಲೇ ಹೊರಬರಲಿರುವ ನನ್ನ ‘ಬಾಂಬೆ ಡೇಸ್’ ಪುಸ್ತಕದ ಮೊದಲ ಅಧ್ಯಾಯದಲ್ಲೇ ಇದೆಲ್ಲ ಅಂಶಗಳೂ ಇರಲಿವೆ. ವಿವರಗಳೆಲ್ಲ ಅದರಲ್ಲೇ ಇರಲಿವೆ ಎಂದು ಹೇಳಿದ್ದಾರೆ.  ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆದುಕೊಂಡು ಬಂದು ಕಡಿದವರೇ ಸಂಸದ ವಿ.ಶ್ರೀನಿವಾಸ ಪ್ರಸಾದ್. ವಿಜಯೇಂದ್ರನ ಮನೆಯಲ್ಲಿ ಮಾತುಕತೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ, ರಮೇಶ ಜಾರಕಿಹೊಳಿ, ವಿಜಯೇಂದ್ರ ಇದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ನೀವು ಬಿಜೆಪಿಗೆ ಬರಬೇಕು ಎಂದು ನನ್ನನ್ನು ಕರೆದಿದ್ದರು. ಆ ಸ್ನೇಹಕ್ಕೆ ಕಟ್ಟುಬಿದ್ದು ಬಂದೆ ಎಂದು ಹೇಳಿದರು.

‌ಶ್ರೀನಿವಾಸಪ್ರಸಾದ್ ಹಾಗೂ ಯಡಿಯೂರಪ್ಪ ನನ್ನ ಕೈಬಿಟ್ಟರು. ನಾನು ಸಚಿವನಾಗಲು ಯಾರೂ ಸಹಕಾರ ಕೊಡಲಿಲ್ಲ. ವಿಧಾನಪರಿಷತ್‌ ಸದಸ್ಯ ಸ್ಥಾನ ಸಿಗುವುದಕ್ಕೂ ಅವರಾರೂ ಕಾರಣವಾಗಲಿಲ್ಲ. ಸಹಾಯವನ್ನೂ ಮಾಡಲಿಲ್ಲ. ನನ್ನನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದವರು ಆರ್‌ಎಸ್‌ಎಸ್ ರಾಜ್ಯ ಪ್ರಮುಖ ಮುಕುಂದ. ಅವರಿಲ್ಲದಿದ್ದರೆ ನನಗೆ ಮೋಸವಾಗುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಅಲೆಮಾರಿ ಎಂದೆಲ್ಲಾ ಪ್ರಸಾದ್ ಈಚೆಗೆ ಟೀಕಿಸಿದ್ದಾರೆ. ಸ್ವಾರ್ಥಕ್ಕಾಗಿ ಸ್ನೇಹವನ್ನು ಮರೆತು ಮಾತನಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. ಐವತ್ತು ವರ್ಷಗಳ ಸ್ನೇಹ ನಮ್ಮದು. ನೀವು ಎಲ್ಲೆಲ್ಲಿದ್ರಿ ಪ್ರಸಾದ್‌? ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದವರು ನೀವು. ನಿಜಲಿಂಗಪ್ಪ ಅವರ ಸಂಸ್ಥಾ ಕಾಂಗ್ರೆಸ್ ಸೇರಿದಿರಿ. ಜನತಾ ಪಾರ್ಟಿ, ಕಾಂಗ್ರೆಸ್, ಸಮತಾ ಪಾರ್ಟಿ, ಜೆಡಿಯು, ಜೆಡಿಎಸ್‌ಗೆ ಹೋಗಿ ಬಂದಿದ್ದೀರಿ. ಮತ್ತೆ ಕಾಂಗ್ರೆಸ್ ಸೇರಿದಿರಿ. ಈಗ ಬಿಜೆಪಿಯಲ್ಲಿದ್ದೀರಿ. ನೀವು ನನ್ನನ್ನು ಅಲೆಮಾರಿ ಎನ್ನುತ್ತೀರಲ್ಲಾ? ಎಂದು ಕೇಳಿದರು.

ನೀವು ದಿಢೀರನೆ ನನ್ನ ಮೇಲೆ ಮುಗಿಬಿದ್ದಿರುವ ಹಿನ್ನೆಲೆ ಏನು? ಯಾರನ್ನು ಮೆಚ್ಚಿಸಲು, ಏನನ್ನು ಪಡೆದುಕೊಳ್ಳಲು ಹೊರಟಿದ್ದೀರಿ? ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳುಬರುತ್ತಿರುವಾಗ, ನನ್ನನ್ನು, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಯಾರನ್ನೋ ಮೆಚ್ಚಿಸಿ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್‌ಗೆ ಸಚಿವ ಸ್ಥಾನ ಕೊಡಿಸುವ ಸ್ವಾರ್ಥ ನಿಮ್ಮದು. ಇನ್ನೊಬ್ಬ ಅಳಿಯನನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರದಿಂದ ನಿಲ್ಲಿಸಬೇಕು, ಮಗಳನ್ನು ತಿ.ನರಸೀಪುರಕ್ಕೆ ತರಲೆಂದು ಮಾತನಾಡುತ್ತಿದ್ದೀರಿ ಎಂದು ಟೀಕಿಸಿದರು, ಸ್ನೇಹಿತನ ಮಾತುಗಳಿಂದ ಬಹಳ ನೋವಾಗಿದೆ ಎಂದು ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com