ಕೊನೆಗೆ ಯಾರಿಗೂ ಮೀಸಲಾತಿ ಸಿಗದಂತೆ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶ: ಡಿಕೆಶಿ

ಕೊನೆಗೆ ಯಾರಿಗೂ, ಯಾವ ಸಮುದಾಯದವರಿಗೂ ಮೀಸಲಾತಿ ಸಿಗದಂತೆ ಮಾಡುವುದೇ ರಾಜ್ಯ ಬಿಜೆಪಿ ಸರ್ಕಾರದ ಉದ್ದೇಶ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(ಕೆಪಿಸಿಸಿ) ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಳಗಾವಿ: ಕೊನೆಗೆ ಯಾರಿಗೂ, ಯಾವ ಸಮುದಾಯದವರಿಗೂ ಮೀಸಲಾತಿ ಸಿಗದಂತೆ ಮಾಡುವುದೇ ರಾಜ್ಯ ಬಿಜೆಪಿ ಸರ್ಕಾರದ ಉದ್ದೇಶ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ(ಕೆಪಿಸಿಸಿ) ಡಿಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.

ರಾಜ್ಯ ಸರ್ಕಾರ ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ಪ್ರತ್ಯೇಕ ಕೆಟಗರಿ ಸೃಷ್ಟಿ ಮಾಡಿದ ಬಗ್ಗೆ ಇಂದು ನಗರದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ, ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಯಾರಿಗೂ ಮೀಸಲಾತಿ ಸಿಗಬಾರದು. ಎಲ್ಲರೂ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡವಂತಾಗಬೇಕು ಎಂಬುದೇ ಅವರ ತಂತ್ರವಾಗಿದೆ ಎಂದರು.

ಮೀಸಲಾತಿ ಹೆಸರಿನಲ್ಲಿ ಅನಗತ್ಯ ಗೊಂದಲ ನಿರ್ಮಾಣ ಮಾಡಿದ್ದಾರೆ. ಕಾನೂನಿನಲ್ಲಿ ಈ ರೀತಿ ಮಾಡಲು ಅವಕಾಶ ಎಲ್ಲಿದೆ‌? ಸಮಾಜದವರು ಯಾರ‍್ಯಾರು ಏನೇನು ಮೀಸಲಾತಿ ಕೇಳ್ತಾರೆ ಅವರಿಗೆ ಕೊಡಬೇಕು. ಅವರು ಕೇಳಿದಷ್ಟು ಪರ್ಸೆಂಟೇಜ್ ಮೀಸಲಾತಿ ಕೊಡಬೇಕು. ಕೊನೆಗೆ ಎಲ್ಲಾ ಕೋರ್ಟ್‌ಗೆ ಹೋಗಿ ಲಿಟಿಗೇಷನ್ ಹಾಕಬೇಕು ಎಂಬುದು ಅವರ ಉದ್ದೇಶ ಎಂದರು.

ಮೀಸಲಾತಿ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ರಾಜ್ಯದ ಸಿಎಂ ನೇರವಾಗಿ ಬಂದು ಮಾತನಾಡಬೇಕಿತ್ತು. ಕ್ಯಾಬಿನೆಟ್ ಬಳಿಕ ಎಷ್ಟು ಪರ್ಸೆಂಟೇಜ್ ನೀಡಿದ್ದೇವೆಂದು ತಿಳಿಸಬೇಕಿತ್ತು. ಒಕ್ಕಲಿಗರು 12 ಪರ್ಸೆಂಟ್ ಮೀಸಲಾತಿ ಕೇಳುತ್ತಿದ್ದಾರೆ. ಪಂಚಮಸಾಲಿಗಳು ಕೇಳ್ತಿದ್ದಾರೆ‌ ಎಂದರು.

ಇನ್ನು ಮೀಸಲಾತಿ ಘೋಷಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆಯದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಸರ್ವಪಕ್ಷ ಸಭೆ ಕರೆಯದೇ ಇರೋದೆ ಒಳ್ಳೆಯದಾಯಿತು. ಅವರಿಗೆ ಯಾರ ಬಗ್ಗೆಯೂ ನಂಬಿಕೆ ಇಲ್ಲ. ಅಲ್ಲಿ ಹೋಗಿ ಅವರು ಹೇಳಿದ ಹಾಗೇ ಕೇಳಿ ಬರೋದು ತಪ್ಪಿತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com