ಕಳಸಾ ಬಂಡೂರಿ ಯೋಜನೆಯ ಡಿಪಿಆರ್ ಕುರಿತ ಆದೇಶದಲ್ಲಿ ದಿನಾಂಕವೇ ಇಲ್ಲ: ಎಚ್ ಕೆ ಪಾಟೀಲ್
ಹುಬ್ಬಳ್ಳಿ: ರಾಜ್ಯ ಸರ್ಕಾರ ಸಲ್ಲಿಸಿದ್ದ ಕಳಸಾ ಬಂಡೂರಿ ನಾಲಾ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಬಿಡುಗಡೆ ಮಾಡಿದ ಆದೇಶದಲ್ಲಿ ದಿನಾಂಕವೇ ಇಲ್ಲ. ಜನರ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಸರ್ಕಾರದಿಂದ ಹೊರಡಿಸುವ ಯಾವುದೇ ಆದೇಶದ ಪ್ರತಿಗೆ ದಿನಾಂಕ ಇದ್ದೇ ಇರುತ್ತದೆ. ಆದರೆ ಈ ಆದೇಶದಲ್ಲಿ ಯಾವುದೇ ದಿನಾಂಕ ಇಲ್ಲ. ಇದು ಸರ್ಕಾರಿ ದಾಖಲೆ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದಿನಾಂಕ ಇಲ್ಲದ ಆದೇಶದ ಪ್ರತಿಯನ್ನು ಕೇಂದ್ರ ಸಚಿವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ಪ್ರದರ್ಶಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಜನರ ದಾರಿ ತಪ್ಪಿಸಲು ಈ ತಂತ್ರ ಹೆಣೆದಿದೆ ಎಂದು ಎಚ್ ಕೆ ಪಾಟೀಲ್ ವಾಗ್ದಾಳಿ ನಡೆಸಿದರು.
ಕೆಲಸ ಆರಂಭ ಮಾಡಬೇಕಾದ ಸಂದರ್ಭದಲ್ಲಿ ಡಿಪಿಆರ್ ಅನುಮತಿ ಬಗ್ಗೆ ಮಾತನಾಡುತ್ತಿರುವುದು ಪುನಃ ಜನರನ್ನು ಮೋಸ ಮಾಡುವುದಾಗಿದೆ. ಅವರಿಗೆ ಯೋಜನೆ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿತ್ತು ಎಂದಿದ್ದಾರೆ.
2002ರಲ್ಲಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಅಲ್ಲಿ ಈಗಾಗಲೇ ಕಾಮಗಾರಿ ಸಹ ಆರಂಭವಾಗಿದೆ. ಈ ಎಲ್ಲಾ ಕಾಮಗಾರಿಗಳು ಡಿಪಿಆರ್ ಇಲ್ಲದೆ ನಡೆದಿದೆಯೇ. ಕೆಲಸ ಮಾಡುವ ಹಂತದಲ್ಲಿ ಯೋಜನೆ ಇರುವಾಗ ಡಿಪಿಆರ್ ಎನ್ನುವ ಒಂದನೇ ತರಗತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಎಚ್ ಕೆ ಪಾಟೀಲ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.