'ಏಷ್ಯಾ ಬುಕ್ ಆಫ್ ರೆಕಾರ್ಡ್ಸ್' - ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ' ಸೇರಿದ ಎಚ್ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ

ಜೆಡಿಎಸ್​ನ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಹೋದ ಕಡೆಯಲ್ಲೆಲ್ಲಾ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ತುಮಕೂರು: ಜೆಡಿಎಸ್​ನ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಹೋದ ಕಡೆಯಲ್ಲೆಲ್ಲಾ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ.

ಕಳೆದ ನವೆಂಬರ್ 18 ರಿಂದ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ದಾಖಲೆಗೆ ಪಾತ್ರರಾಗಿದ್ದಾರೆ. ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಪಂಚರತ್ನಯಾತ್ರೆ ' ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ' ಹಾಗೂ ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ' ದಾಖಲೆಗೆ ಸೇರಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿನ್ನೆ ಇಡೀ ದಿನ ಯಾತ್ರೆ ನಡೆಸಿ ಕಳೆದ ರಾತ್ರಿ ಕ್ಷೇತ್ರದ ಯಲ್ಲಾಪುರದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದರು. ಆ ಗ್ರಾಮಕ್ಕೆ ಆಗಮಿಸಿದ ' ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ' ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಆರ್.ಹರೀಶ್  ಕುಮಾರಸ್ವಾಮಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಮೆಡಲ್ ಗಳನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ' ತೀರ್ಪುಗಾರರಾದ ಮೋಹಿತ್ ಕುಮಾರ್ ಅವರು, ಇದೊಂದು ವಿಶೇಷವಾದ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರು ತಮ್ಮ ಬೆಳೆಗಳನ್ನೇ ಬೃಹತ್ ಹಾರಗಳನ್ನಾಗಿ ತಯಾರಿಸಿ  ಸ್ವಾಗತಿಸುತ್ತಿರುವುದು ಸೋಜಿಗ, ಮೊದಲ ದಾಖಲೆ ಎಂದರು.

ಕೋಲಾರದ ಮುಳಬಾಗಿಲಿನಿಂದ ಶುರುವಾದ ಯಾತ್ರೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್​ಗೆ ಆಗಮಿಸಿದೆ.  ಮುಸುಕಿನ ಜೋಳದ ಹಾರ, ಸೇಬಿನ ಹಾರ, ಅನಾನಸ್​ ಹಣ್ಣಿನ ಹಾರ, ಮೂಸಂಬಿ ಹಾರ, ಗುಲಾಬಿ, ಸೇವಂತಿಗೆ, ಸೇಬಿನ ಹಾರ, ದಪ್ಪ ಮೆಣಸಿನಕಾಯಿ, ಎಲೆಕೋಸು, ಕ್ಯಾರೆಟ್​… ತರಕಾರಿ-ಹೂವಿನ ಹಾರಗಳನ್ನ ದಾರಿಯುದ್ದಕ್ಕೂ ಹಾಕುತ್ತಿದ್ದಾರೆ. ದೇವನಹಳ್ಳಿಯಲ್ಲಿ ಚಕೋತಾ ಹಣ್ಣಿನ ಬೃಹತ್​ ಹಾರ, ಮಂಡ್ಯದಲ್ಲಿ ಸಕ್ಕಾರೆ ನಾಡಿದ ಸೊಬಗನ್ನ ಪರಿಚಯಿಸುವ ನಿಟ್ಟಿನಲ್ಲಿ ಕಬ್ಬಿನ ಜಲ್ಲೆಗಳಿಂದಲೇ ತಯಾರಿಸಿದ ಹಾರ, ಬೆಲ್ಲದಿಂದ ಮಾಡಿದ ಹಾರಗಳು, ಕೊಬ್ಬರಿ ಹಾರ ಗಮನ ಸೆಳೆದವು.

ಮಂಡ್ಯದಲ್ಲಿ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭಿಮಾನ ಮೆರೆದರು. ಕಲ್ಪತರು ನಾಡು ತುಮಕೂರಲ್ಲಿ ಕೊಬ್ಬರಿ ಹಾರ, ಸ್ಕೂಲ್​ ಬ್ಯಾಗ್​ಗಳಿಂದಲೇ ನಿರ್ಮಿಸಿದ್ದ ಬೃಹತ್​ ಹಾರ, ನೇಗಿಲು ಹಾರ, 15 ಸಾವಿರ ಕಾಯಿನ್​ ಬಳಸಿ ತಯಾರಿಸಿದ್ದ ಹಾರ, ಹೊಂಬಾಳೆ ಹಾರ, ಸೌತೆಕಾಯಿ ಹಾರ, ಜೆಡಿಎಸ್​ ಚಿಹ್ನೆಯ ಹಾರ, ಮಣ್ಣಿನ ಹಾರ, ಕಿರೀಟ ಹಾರ, ಭತ್ತ ನೇಗಿಲು ಹಾರ, ಅತ್ತಿನ ಲಾಳದ ಹಾರಗಳನ್ನ ಹಾಕಿ ಎಚ್​ಡಿಕೆಯನ್ನು ಸ್ವಾಗತಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದು ನನಗೆ ಅಚ್ಚರಿಯ ಗೌರವ. ಈ ದಾಖಲೆಗಳನ್ನು ನನ್ನ ನಾಡಿನ ರೈತರು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com