ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಪಠ್ಯ ಪುಸ್ತಕ ಪರಿಷ್ಕರಣೆ: ದೇವೇಗೌಡರ ಸಲಹೆ ಗಂಭೀರವಾಗಿ ಪರಿಗಣನೆ – ಸಿಎಂ ಬೊಮ್ಮಾಯಿ

ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.
Published on

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.

ಪಠ್ಯ ಪರಿಷ್ಕರಣೆ ವಾಪಸ್ ಗೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದು, ಕುರಿತು ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳು ಬರೆದಿರುವ ಪತ್ರದ ವಿವರಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡ್ತೇನೆ. ಮಾಜಿ ಪ್ರಧಾನಿಗಳು ನಮಗೆಲ್ಲರಿಗೂ ಹಿರಿಯರು. ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾನು ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸ್ತೇನೆ ಎಂದರು.

ದೇವೇಗೌಡರು ಬರೆದಿರುವ ಪತ್ರದ ಸಾರವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ. ಅವರು ಏನೆಲ್ಲ ಸಲಹೆ ಕೊಟ್ಟಿದ್ದಾರೋ ಅವುಗಳನ್ನು ಗಂಭೀರವಾಗಿ ಪರಿಗಣಿಸ್ತೇವೆ. ಏನೆಲ್ಲ ಬದಲಾವಣೆ ಮಾಡಲು ಸಾಧ್ಯವೋ ಅದರ ಸಂಬಂಧ ತೀರ್ಮಾನಗಳನ್ನು ಮಾಡ್ತೇವೆ ಮತ್ತು ಅವರಿಗೆ ಉತ್ತರವನ್ನು ಗೌರವಪೂರ್ವಕವಾಗಿ ಬರೆಯುತ್ತೇನೆ ಎಂದು ಹೇಳಿದರು.

ಜನದ್ರೋಹ ಮಾಡಿ ಯೋಗ ಮಾಡಲು ರಾಜ್ಯಕ್ಕೆ ಮೋದಿ ಬಂದಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದ ಸಿಎಂ, ಇವತ್ತೇನಾದರೂ ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅಂದ್ರೆ ಅದು ಮೋದಿಯವರು. ಕರ್ನಾಟಕಕ್ಕೆ ಕೋವಿಡ್ ನಿರ್ವಹಣೆಗೆ ಸಾವಿರಾರು ಕೋಟಿ ಕೊಟ್ಟಿದ್ದಾರೆ. ಔಷಧ, ಲಸಿಕೆ, ಉಪಕರಣಗಳು, ಆಕ್ಸಿಜನ್, ಆಕ್ಸಿಜನ್ ಉತ್ಪಾದಿಸುವ ಯಂತ್ರಗಳನ್ನು, ವೆಂಟಿಲೇಟರ್ ಗಳನ್ನು ಕಳಿಸಿದ್ದಾರೆ. ರಾಜಕೀಯವಾಗಿ ಮಾತಾಡಬೇಕು ಅಂತ ಮಾತಾಡಿದರೆ ಅದಕ್ಕೆ ಅರ್ಥ ಇರಲ್ಲ. ಜನರಿಗೆ ಎಲ್ಲವೂ ನೆನಪು ಇರುತ್ತದೆ. ಮೋದಿಯವರು ರಾಜ್ಯಕ್ಕೆ ಏನ್ ಸಹಾಯ ಮಾಡಿದ್ದಾರೆ ಅಂತ ಜನಕ್ಕೆ ಗೊತ್ತಿದೆ. ಅವರ ಜನಪ್ರಿಯತೆ ನೋಡಿ ಈ ತರಹ ಮಾತಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಗೆ ತಿರುಗೇಟು ನೀಡಿದರು.

ಬಳಿಕ ಬೊಮ್ಮಾಯಿ ಆಡಳಿತಕ್ಕೆ ಮೋದಿ ಮೆಚ್ಚುಗೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಮೋದಿಯವರು ಯಾವಾಗಲೂ ಸುಶಾಸನ, ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಂಡವರು. ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳ ಜಾರಿ ಆಗಿದೆ. ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಹಣ ನೀಡಿ ಅವರ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿರೋದನ್ನು ಅವರು ನೋಡಿದ್ದಾರೆ. ಮೋದಿಯವರ ಮೆಚ್ಚುಗೆ ನನಗೆ ದೊಡ್ಡ ಶಕ್ತಿ ನೀಡಿದೆ. ನಾನು ಇನ್ನಷ್ಟು ಬದ್ಧತೆಯಿಂದ, ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ಅವರ ಮೆಚ್ಚುಗೆ ಪುಷ್ಟಿ ಕೊಟ್ಟಿದೆ ಎಂದು ಹೇಳಿದರು.

ಇನ್ನು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬಗ್ಗೆ ನಾಳೆ ಸ್ವಾಮೀಜಿಗಳ ಸಭೆ ವಿಚಾರ ಕುರಿತು ಮಾತನಾಡಿದ ಸಿಎಂ, ಅದರ ಬಗ್ಗೆ ಸಮುದಾಯವರು ಮತ್ತು ಸಿಸಿ ಪಾಟೀಲ್ ಅವರು ಸ್ವಾಮೀಜಿಗಳ ಜತೆ ಮಾತಾಡ್ತಾರೆ ಎಂದರು. ಈ ಸಭೆ ನಾಳೆ ಬೆಳಿಗ್ಗೆ 10 ಗಂಟೆಗೆ ಸಚಿವ ಸಿ ಸಿ ಪಾಟೀಲ್ ಮನೆಯಲ್ಲಿ ನಡೆಯಲಿದ್ದು, ಜಯ ಮೃತ್ಯುಂಜಯ ಸ್ವಾಮೀಜಿಯೂ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com