'ಬಿಜೆಪಿ ಎಂದರೆ ಬಲ್ಲಿದರ ಆಡಂಬೋಲ, ಬಿಸ್‌ನೆಸ್ ಕ್ಲಾಸಿನ ಕಾಮಧೇನು, ಬಡವರ ಪಾಲಿನ ರಕ್ತಪಿಪಾಸು'

ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು. ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ, ನಿಯಮಿತ ವಿದ್ಯುತ್ ಪೂರೈಕೆ ಮಾಡದ ಸರ್ಕಾರಕ್ಕೆ ದರ ಏರಿಕೆ ಮಾಡುವ ನೈತಿಕ ಹಕ್ಕಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಜನರನ್ನು ಒಗ್ಗೂಡಿಸಿ  ಜನಾಂದೋಲನಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್‌ಡಿಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇದೆ. ಈಗ ಬೆಲೆ ಏರಿಸಿ, ಇನ್ನೇನು ಚುನಾವಣೆ ದಿನಾಂಕ ಹತ್ತಿರದಲ್ಲಿದೆ ಎನ್ನುವಾಗ ದರ ಇಳಿಸುವ ಸ್ಟಂಟ್ ಇದರ ಹಿಂದೆ ಇದೆ. ವೆಚ್ಚ ಹೊಂದಾಣಿಕೆಯ ಹೊಸ ಐಡಿಯಾ ಅಂದರೆ ಇದೇನಾ’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಎಂದರೆ ಬೆಲೆ ಏರಿಕೆ, ಬೆಲೆ ಏರಿಕೆ ಎಂದರೆ ಬಿಜೆಪಿ. ಬಲಿಷ್ಟರು, ಬಲ್ಲಿದರ ಆಡಂಬೋಲ. ಬಿಸ್‌ನೆಸ್ ಕ್ಲಾಸಿನ ಕಾಮಧೇನು. ಬಡವರು ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ರಕ್ತಪಿಪಾಸು ಎಂದು  ವಾಗ್ದಾಳಿ ನಡೆಸಿದ್ದಾರೆ.

ಇಂಧನ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ವಿದ್ಯುತ್ ಸೋರಿಕೆ ತಡೆಯಲಾಗದ ಅದಕ್ಷತೆ ಬಗ್ಗೆ ಜನರಿಗೆ ತಿಳಿದಿದೆ. ಆ ಹೊರೆಯನ್ನು ಜನರ ಮೇಲೆ ಹೇರಿ ಮೊದಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಲೂಟಿಗೆ ತುತ್ತಾಗಿರುವ ಜನರನ್ನು ಮತ್ತಷ್ಟು ಸುಲಿಗೆ ಮಾಡುವ ಪ್ರಯತ್ನ ಇದಾಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಾಸಿಕ 100 ಯೂನಿಟ್ ಬಳಸುವ ಗ್ರಾಹಕರು ಹೆಚ್ಚು ಬೆಲೆ ತೆರಬೇಕು. ಅಂದರೆ, ಬಡವರು ಮತ್ತು ಮಧ್ಯಮ ವರ್ಗದ ಜನರು ವಿದ್ಯುತ್ ಬಳಸದೇ ಕತ್ತಲಲ್ಲಿ ಕೊಳೆಯಬೇಕೆ? ಗತಿಶಕ್ತಿ ಯೋಜನೆ ಮೂಲಕ ದೇಶಕ್ಕೆ ಹೊಸ ಗತಿ ಕಾಣಿಸುವುದು ಎಂದರೆ ಇದೇನಾ  ಎಂದು ಗುಡುಗಿದ್ದಾರೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ವಿದ್ಯುತ್ ಉತ್ಪಾದನೆಯೂ ಚೆನ್ನಾಗಿದೆ. ಹೆಚ್ಚುವರಿ ವಿದ್ಯುತ್ ಇದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ದರ ಏರಿಕೆ. ಇದರ ಹಿಂದಿನ ಹುನ್ನಾರ ಏನು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.   

ಬೆಲೆ ಏರಿಕೆ ಬರೆ ಎಳೆಯುವಲ್ಲಿ ಬಿಜೆಪಿ ಸರ್ಕಾರದ್ದು ಸಾರ್ವಕಾಲಿಕ ದಾಖಲೆ. ಏಪ್ರಿಲ್ 1ರಂದು ವಿದ್ಯುತ್ ದರ ಏರಿಸಿ ಜನರಿಗೆ ಶಾಕ್ ನೀಡಿದ್ದ ಸರ್ಕಾರ, ಈಗ ಜುಲೈ 1ರಿಂದ ಮತ್ತೆ ವಿದ್ಯುತ್ ಬರೆ ಎಳೆಯಲು ಸಜ್ಜಾಗಿದೆ’ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com