
ಬೆಂಗಳೂರು: ಸರ್ಕಾರಿ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಸುವ ಕುರಿತು ಪರ-ವಿರೋಧ ವಾದಗಳು ತೀವ್ರಗೊಂಡ ನಡುವೆಯೇ ಕಾಂಗ್ರೆಸ್ ಪಕ್ಷವು ಹೊಸ ಟ್ವಿಟ್ಟರ್ ಅಭಿಯಾನ ಕೈಗೊಂಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯಾದ್ಯಂತ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ, ಶೌಚಾಲಯವಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಸಿಎಂಅಂಕಲ್, ಕೇಸರಿ ಬಣ್ಣ ಬಳಿಯುವಿರಂತೆ, ಆದರೆ ಮೊದಲು ಶೌಚಾಲಯ ಕಟ್ಟಿಸಿಕೊಡಿ. ಕುಡಿಯಲು ಶುಚಿಯಾದ ನೀರು ಕೊಡಿ, ಶಾಲೆಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡಿಕೊಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕೋವಿಡ್ ನಂತರ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಬಾಲಕಾರ್ಮಿಕರ ಸಂಖ್ಯೆ ಏರಿಕೆಯಾಗಿದೆ, ಬಾಲ್ಯವಿವಾಹವೂ ಏರಿಕೆಯಾಗಿದೆ. ಸಿಎಂಅಂಕಲ್, ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಯೋಜನೆ ರೂಪಿಸುವುದನ್ನು ಬಿಟ್ಟು ಬಣ್ಣ ಬಣ್ಣ ಬಳಿಯುವ ಬಣ್ಣ ಬಣ್ಣದ ಮಾತಾಡಿಕೊಂಡು ಕುಳಿತಿರುವುದೇಕೆ? ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಶಾಲೆಗಳಲ್ಲಿ ಶೌಚಾಲಯಗಳಿಲ್ಲ ಸಿಎಂ ಅಂಕಲ್.
ಕರೋನಾನಂತರದ ಶೈಕ್ಷಣಿಕ ಬಿಕ್ಕಟ್ಟುಗಳನ್ನು ಗಮನಿಸುವುದನ್ನು ಬಿಟ್ಟು ಪಠ್ಯಪುಸ್ತಕದಲ್ಲಿ ಅವಾಂತರ ಸೃಷ್ಟಿಸಿತ್ತು ಸರ್ಕಾರ. ಶಾಲೆ ಶುರುವಾಗಿ ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕದ ಗೊಂದಲ ಬಗೆಹರಿಸಲಿಲ್ಲ, ಮಕ್ಕಳಿಗೆ ಪಠ್ಯಪುಸ್ತಕ ನೀಡಲಿಲ್ಲ. ಸಿಎಂಅಂಕಲ್ ಮಕ್ಕಳು ಏನನ್ನ ಓದಬೇಕು, ಪರೀಕ್ಷೆಗೆ ಹೇಗೆ ಸಜ್ಜಾಗಬೇಕು? ನೀವು ಪುಸ್ತಕ ಕೊಡುವುದೆಂದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಶಾಲೆ ಶುರುವಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಮವಸ್ತ್ರ ಪೂರೈಕೆಯಾಗಿಲ್ಲ. ಮಕ್ಕಳು ಎರಡು ವರ್ಷ ಹಳೆಯದಾದ ಹರಿದುಹೋದ ಸಮವಸ್ತ್ರ ಹಾಕಿಕೊಂಡು ಬರ್ತಿದ್ದಾರೆ, ಮಕ್ಕಳಿಗೆ ಸಮವಸ್ತ್ರ ನೀಡುವಲ್ಲೂ ವಿಳಂಬವೇಕೆ, ಸಮವಸ್ತ್ರ ನೀಡುವುದು ಯಾವಾಗ? ಸಿಎಂಅಂಕಲ್ ? ಎಂದು ಕರ್ನಾಟಕ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಸೈಕಲ್‌ಗಳಲ್ಲೂ ಹಗರಣ ನಡೆಸಿ ಕಳಪೆ ಸೈಕಲ್ ವಿತರಿಸಿದರೂ ಸರ್ಕಾರದ ಸೈಕಲ್‌ಗಳಿಂದ ಶಾಲಾ ಮಕ್ಕಳಿಗೆ ಅನುಕೂಲವಿತ್ತು. ಈಗ ಸೈಕಲ್ ಕೊಡುವುದನ್ನೇ ನಿಲ್ಲಿಸಿದ್ದೇಕೆ ಸಿಎಂಅಂಕಲ್? ದೂರದಿಂದ ಸಮಯಕ್ಕೆ ಸರಿಯಾಗಿ ಶಾಲೆ ತಲುಪುವುದು ಹೇಗೆ? ಹಲವು ಸವಾಲುಗಳನ್ನು ಮುಂದಿಟ್ಟರೆ ಮಕ್ಕಳು ಶಿಕ್ಷಣದತ್ತ ಆಕರ್ಷಿತರಾಗುವುದು ಹೇಗೆ?ʼʼ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
"ಶಾಲೆಗಳಿಗೆ ಕೇಸರಿ ಬಣ್ಣ ಬಳಿಯಲು ವಿವೇಕಾನಂದರ ನೆಪ ಹೇಳುವ ಸರ್ಕಾರ ವಿವೇಕಾನಂದರ ನೈಜ ತತ್ವಗಳನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲವೇಕೆ? ಜೇಮ್‌ಶೇಟ್ ಜಿ ಟಾಟಾ ಅವರ ಮೂಲಕ ಭಾರತದ ಕೈಗಾರಿಕೆ & ವೈಜ್ಞಾನಿಕ ಕ್ರಾಂತಿಗೆ ವಿವೇಕಾನಂದರು ಕಾರಣರಾಗಿದ್ದರು. #ಸಿಎಂಅಂಕಲ್ ಮಕ್ಕಳಲ್ಲಿ ವೈಜ್ಞಾನಿಕ ಮನಭಾವ ಮೂಡಿಸುವಲ್ಲಿ ತಾವು ಕೆಲಸ ಮಾಡ್ತಿಲ್ಲವೇಕೆ?ʼʼ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Advertisement