ಖರ್ಗೆಗಾಗಿ ಕೆಪಿಸಿಸಿ ಮುಖ್ಯ ವಕ್ತಾರ ಸ್ಥಾನಕ್ಕೆ ವಿ.ಆರ್ ಸುದರ್ಶನ್ ರಾಜೀನಾಮೆ: ಡಿ.ಕೆ ಶಿವಕುಮಾರ್ ಗೆ ಪತ್ರ

ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ವಿ.ಆರ್ ಸುದರ್ಶನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರಿಗೆ ಕಳುಹಿಸಿದ್ದಾರೆ.
ವಿ.ಆರ್ ಸುದರ್ಶನ್
ವಿ.ಆರ್ ಸುದರ್ಶನ್
Updated on

ಬೆಂಗಳೂರು: ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ವಿ.ಆರ್ ಸುದರ್ಶನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರಿಗೆ ಕಳುಹಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅವರನ್ನು ಬೆಂಬಲಿಸುವ ಮತ್ತು ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಪತ್ರದಲ್ಲಿ ಸುದರ್ಶನ್​ ಬರೆದಿದ್ದಾರೆ.

ರಾಜಿನಾಮೆ ಪತ್ರದಲ್ಲಿ ಸುದರ್ಶನ್ ಉಲ್ಲೇಖಿಸಿರುವ ಅಂಶಗಳೇನು?

ಅಖಿಲ ಭಾರತ ಕಾಂಗ್ರೆಸ್ ನ ಪರಂಪರೆ, ಪ್ರಯತ್ನ, ಸಾಧನೆಗಳ ಈ ಹಿನ್ನೆಲೆಯಲ್ಲಿ ಸುಮಾರು 24 ವರ್ಷಗಳ ನಂತರ ಆಂತರಿಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಎಐಸಿಸಿ ಅಧ್ಯಕ್ಷ ಪದವಿಗೆ ಚುನಾವಣೆ ನಡೆಸುತ್ತಿರುವುದು ಸ್ವಾಗತಾರ್ಹ. ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಭರವಸೆ ಮೂಡಿಸಿರುವ ಶ್ರೀ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಪಾದಯಾತ್ರೆ ಮಾಡುತ್ತಿರುವುದು ಉತ್ತಮ ಪ್ರಯತ್ನ ಹಾಗೂ ಬೆಳವಣಿಗೆ.

ಎಐಸಿಸಿ ಅಧ್ಯಕ್ಷ ಪದವಿಗೆ ಸ್ಪರ್ಧಿಸಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಹಿರಿಯ ಅನುಭವಿ ನಾಯಕ ಅವರಿಗೆ ಅಭಿನಂಧನೆಗಳು ಹಾಗೂ ಶುಭಾಶಯಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ, ಕರ್ನಾಟಕ ವಿಧಾನಸಭಾ ವಿರೋಧ ಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ಎಐಸಿಸಿ , CWC ಸದಸ್ಯರಾಗಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿಯಾಗಿ ಮತ್ತು ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಿ, ಅಪಾರ ಅನುಭವ ಹೊಂದಿದ್ದಾರೆ.

ಈ ಅನುಭವ ಮತ್ತು ಹಿರಿತನ ಪಕ್ಷಕ್ಕೆ ಭವಿಷ್ಯದಲ್ಲಿ ಸಂಘಟನೆಗೆ ಪ್ರಯೋಜನಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ದೇಶದ ಎಲ್ಲಾ ಕಾಂಗ್ರೆಸ್ ಸದಸ್ಯರು ಅವರ ಅಭ್ಯರ್ಥಿ ಆಯ್ಕೆ ಬೆಂಬಲಿಸಬೇಕೆಂದು ಮನವಿ ಮಾಡುತ್ತೇನೆ.

ಹಾಗೇಯೆ ಎಐಸಿಸಿ ಕೇಂದ್ರ ಚುನಾವಣಾ ಮಂಡಳಿ ಅಧ್ಯಕ್ಷರಾದ ಮಧುಸೂದನ್ ಮಿಸ್ತ್ರಿ ಅವರು ಚುನಾವಣಾ ಹಿನ್ನೆಲೆಯಲ್ಲಿ ಉತ್ತಮ ನಿಯಮಗಳನ್ನು ಪಾಲನೆ ಮಾಡಲು ತಿಳಿಸಿರುತ್ತಾರೆ. ಅದು ಕೂಡ ಸ್ವಾಗತಾರ್ಹ ಮತ್ತು ಅವರಿಗೆ ಅಭಿನಂದನೆಗಳು.ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುವ ಮತ್ತು ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ನಾನು ಕೆಪಿಸಿಸಿ ಮುಖ್ಯ ವಕ್ತಾರರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ… ಎಂದು ಪತ್ರದಲ್ಲಿ ತಿಳಿಸಲಾಗಿದೆ.

1978ರಲ್ಲಿ ವೇಮಗಲ್ ಗ್ರಾಮಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿರುವ ಸುದರ್ಶನ್, 1988ರಿಂದ 2006ರವರೆಗೆ ಮೂರು ಅವಧಿಗಳಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಪರಿಷತ್ ಉಪಸಭಾಪತಿ ಹಾಗೂ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಈಗಾಗಲೇ ನಾಮಪ ಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂದಕ್ಕೆ ಪಡೆಯಲು ಅ.8ರವರೆಗೆ ಅವಕಾಶ ಇರುತ್ತದೆ. ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಅಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುತ್ತೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅ.17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com