ಜನತಾ ಪರಿವಾರ ಪುನರುಜ್ಜೀವನಗೊಳಿಸುವ ಸಂಕಲ್ಪ: ದೇವೇಗೌಡರ ಹಾದಿಯಲ್ಲಿ ಕುಮಾರಸ್ವಾಮಿ; ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ?

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನವದೆಹಲಿಯಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.
ನಿತೀಶ್ ಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ
ನಿತೀಶ್ ಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನವದೆಹಲಿಯಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕುಮಾರಸ್ವಾಮಿ, ‘ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತುಕತೆ ನಡೆಯಿತು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ’ ಎಂದರು.

‘ಬಿಹಾರದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿದೆ. ಜೆ.ಪಿ. ಅವರಿಂದ ಪ್ರಾರಂಭವಾದ ಜನತಾ ಪರಿವಾರ ಮತ್ತೆ ಒಂದುಗೂಡಬೇಕಿದೆ. ಈಗ ದೇಶದಲ್ಲಿ ಬಲವಾದ ವಿರೋಧ ಪಕ್ಷದ ಅವಶ್ಯಕತೆ ಇದೆ’ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ಬಿಹಾರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಂತರ ಈ ಭೇಟಿ ನಿರ್ಣಾಯಕವಾಗಿದೆ ಎಂದು ಹೇಳಿದರು. ಇದು ದೇಶದ ರಾಜಕೀಯ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ಅವರು ಹೇಳಿದರು.

ಇತ್ತೀಚಿಗೆ ದೇಶದ ಉದ್ದಗಲಕ್ಕೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ಆದಂತಹ ಒಂದು ರಾಜಕೀಯದ ಒಂದು ಹೊಸ ಬೆಳವಣಿಗೆ ಎಲ್ಲರ ಗಮನ ಸೆಳೆದಿದೆ. ಜನತಾ ಪರಿವಾರ ಮತ್ತೆ ಒಂದಾಗಬೇಕೆಂಬ ಚರ್ಚೆಗಳು ನಡೆದಿವೆ. ನಿತೀಶ್‌ ಕುಮಾರ್‌ ಅವರು ಕೆಲ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದ ಜನಪರ ಕಾರ್ಯಕ್ರಮಗಳನ್ನು ನಿತೀಶ್ ಕುಮಾರ್ ಹಾಡಿ ಹೊಗಳಿದ್ದಾರೆ, 2023 ರ ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದಿಂದ ಇಂಪ್ರೆಸ್ ಆಗಿದ್ದಾರೆ ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಜೆಡಿಯು ಕರ್ನಾಟಕ ಅಧ್ಯಕ್ಷ ಮಹಿಮಾ ಪಟೇಲ್ ಕೂಡ ಉಪಸ್ಥಿತರಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಜೆಡಿಯು ಕೆಲವು ಸ್ಥಾನಗಳನ್ನು ಹಂಚಿಕೊಳ್ಳಬಹುದು ಎಂಬ ಊಹಾಪೋಹ ಕೇಳಿ ಬರುತ್ತಿದೆ

224 ವಿಧಾನಸಭಾ ಸ್ಥಾನಗಳ ಪೈಕಿ ಜೆಡಿಎಸ್ 123 ಸ್ಥಾನಗಳ ಮೇಲೆ ಮಾತ್ರ ಗಮನಹರಿಸುತ್ತಿರುವುದರಿಂದ ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಜೆಡಿಯುಗೆ ಬೆಂಬಲ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯಲ್ಲಿ ತೊಡಗಿಸಿಕೊಂಡಿರುವ ನಿತೀಶ್‌ಗೆ, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳನ್ನು ವಿಶೇಷವಾಗಿ ದಕ್ಷಿಣದಲ್ಲಿ ಭೇಟಿಯಾಗುವುದು ನಿರ್ಣಾಯಕ ಎಂದು ರಾಜಕೀಯ ಪಂಡಿತರು ಹೇಳಿದ್ದಾರೆ.

ನಿತೀಶ್ ಅವರೊಂದಿಗಿನ ಕುಮಾರಸ್ವಾಮಿ ಅವರ ಭೇಟಿಯು ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆಯುವ ಆರೋಪಗಳನ್ನು ತಳ್ಳಿಹಾಕಲು ಮತ್ತು ಜಾತ್ಯತೀತ ಪಕ್ಷವಾಗಿ ತನ್ನ ಅರ್ಹತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇವೇಗೌಡರು ವಯೋಸಹಜ ಕಾಯಿಲೆಗಳಿಂದ ಸ್ವಲ್ಪ ಸಮಯದಿಂದ ಚೇತರಿಸಿಕೊಳ್ಳದ ಕಾರಣ, ರಾಷ್ಟ್ರಮಟ್ಟದ ರಾಜಕೀಯ ವ್ಯವಹಾರಗಳಿಗೆ ಹಾಜರಾಗಲು ಕುಮಾರಸ್ವಾಮಿ ತಮ್ಮ ತಂದೆಯ ಹಾದಿಯಲ್ಲಿಯೇ ನಡೆಯುತ್ತಿರುವುದು ಕಂಡು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com