'ಮನಿ ಇದ್ದಲ್ಲಿ ಮಾತ್ರ ಮುನಿ', ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ; 'ಮಳೆಯಲಿ, ಚಳಿಯಲ್ಲಿ ಬೆಚ್ಚಗೆ ಮಲಗಿರುವವರನ್ನು ಹುಡುಕಿಕೊಡಿ: ಕಾಂಗ್ರೆಸ್

ರಾಜ್ಯ ತೀವ್ರ ಮಳೆಗೆ ಅಪಾರ ಹಾನಿಗೊಳಗಾಗಿದೆ. ಬೆಂಗಳೂರು ಪರಿಸ್ಥಿತಿ ಮಾತ್ರ ಹೇಳತೀರದ್ದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ 'ಕಾಣೆಯಾಗಿದ್ದಾರೆ' ಎನ್ನುವ ಮೂಲಕ ಸಚಿವರ ಹುಡುಕಿಕೊಡುವಂತೆ ಮನವಿ ಮಾಡಿದೆ.
ಅಶೋಕ್ ಮತ್ತು ವಿ ಸೋಮಣ್ಣ
ಅಶೋಕ್ ಮತ್ತು ವಿ ಸೋಮಣ್ಣ

ಬೆಂಗಳೂರು: ಕರ್ನಾಟಕ ಈ ತೀವ್ರ ಮಳೆಗೆ ಅಪಾರ ಹಾನಿಗೊಳಗಾಗಿದೆ. ಅದರಲ್ಲೂ ಬೆಂಗಳೂರು ಪರಿಸ್ಥಿತಿ ಮಾತ್ರ ಹೇಳತೀರದ್ದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಕಾಂಗ್ರೆಸ್ 'ಕಾಣೆಯಾಗಿದ್ದಾರೆ' ಎನ್ನುವ ಮೂಲಕ ಸಚಿವರ ಹುಡುಕಿಕೊಡುವಂತೆ ಮನವಿ ಮಾಡಿದೆ.

ಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದರು ರಾಜ್ಯದ ಸಚಿವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರೆಲ್ಲ ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಸಚಿವರ ಫೋಟೋ ಸಮೇತ 'ಕಾಣೆಯಾಗಿದ್ದಾರೆ' ಎನ್ನು ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಾಣೆಯಾದವರ ಪಟ್ಟಿಯಲ್ಲಿ ಸಚಿವ ಬೈರತಿ ಬಸವರಾಜ್, ಸಚಿವ ಅಶ್ವಥ್ ನಾರಾಯಣ್, ಸಚಿವ ಮುನಿರತ್ನ, ಆರ್ ಅಶೋಕ್, ಎಸ್‌ ಟಿ ಸೋಮಶೇಖರ್, ವಿ ಸೋಮಣ್ಣ, ಸಚಿವ ಡಾ.ಕೆ ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಇದ್ದಾರೆ. ಇವರೆಲ್ಲರ ಫೋಟೋ ಹಾಕುವ ಮೂಲಕ ಕಾಂಗ್ರೆಸ್ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

ಒಂದೇ ಒಂದು ಬಾರಿ ಸಿಎಂ ಜೊತೆಯಲ್ಲಿ ನೆಪಮಾತ್ರದ ಸಿಟಿ ರೌಂಡ್ಸ್‌ ಹೊಡೆದಿದ್ದು ಬಿಟ್ಟರೆ ಬೆಂಗಳೂರಿನ ಸಚಿವರಾದ ಭೈರತಿ ಬಸವರಾಜ್‌ರವರು ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ನೀರು ನುಗ್ಗಿದ ಮನೆಗಳಿಗೆ ಪರಿಹಾರವೇನು? ನೀರು ನಿಂತ ರಸ್ತೆಗಳಿಗೆ ಮುಕ್ತಿ ಏನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಚಿವ ಕೆ.ಸುಧಾಕರ್  ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು. ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ ಸ್ವಿಮ್ಮಿಂಗ್ ಮಾಡುವ ಸ್ಥಿತಿ ಇದೆ, ಸಚಿವರು ನಾಪತ್ತೆಯಾಗಿದ್ದಾರೆ. ಜನತೆಗೆ ಜಲೋತ್ಸವದ ಸಂಕಟ, ಬಿಜೆಪಿಗೆ ಜನೋತ್ಸವದ ಚೆಲ್ಲಾಟ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಳೆದ ಒಂದು ವಾರದಿಂದ ಮಳೆಯಲ್ಲಿ ಜನತೆ ಮುಳುಗಲು ಶುರುವಾದಾಗಿನಿಂದ ರಾಜ್ಯದ ಗೃಹಸಚಿವರು ನೆರೆ ಪೀಡಿತ ಪ್ರದೇಶದಲ್ಲಾಗಲಿ, ಬೆಂಗಳೂರಿನಲ್ಲಾಗಲಿ, ವಿಧಾನಸೌಧದಲ್ಲಾಗಲಿ ಕಾಣಿಸಲಿಲ್ಲ. ಸ್ವಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಆರಗ ಜ್ಞಾನೇಂದ್ರ  ಅವರು ಗೃಹಸಚಿವರಾಗಿ ಕೆಲಸ ಮಾಡಲು ಆರಂಭಿಸುವುದು ಯಾವಾಗ!?

ಬೆಂಗಳೂರಿನ ಜನರು ಕೊಟ್ಟ ಅಧಿಕಾರವನ್ನು ಅನುಭವಿಸುತ್ತಿರುವ ಆರ್. ಅಶೋಕ ಅವರು ಯಾವ ಬಡಾವಣೆ, ಗಲ್ಲಿಗಳಲ್ಲೂ ಕಾಣಿಸಿಕೊಳ್ಳಲಿಲ್ಲ, ಜನತೆಯ ನೆರವಿಗೆ ನಿಂತಿದ್ದು ಕಾಣಲಿಲ್ಲ. ಜನರಿಗೆ ಕಷ್ಟದ ಸಮಯವೆಂದರೆ ಬಿಜೆಪಿಗೆ ವಿಶ್ರಾಂತಿಯ ಸಮಯ, ಮಳೆ ಮುಗಿದ ನಂತರ ಹಿಜಾಬ್, ಹಲಾಲ್‌ಗಳಿಗೆ ಕ್ರಿಯಾಶೀಲರಾಗ್ತಾರೆ! ಎಂದು ಲೇವಡಿ ಮಾಡಿದೆ.

ಬೆಂಗಳೂರಲ್ಲೇ ಬೆಳೆದು, ಬೆಂಗಳೂರಲ್ಲೇ ಅಧಿಕಾರ, ಆಸ್ತಿ, ಅಂತಸ್ತು ಕಂಡುಕೊಂಡ ಸಚಿವ ವಿ.ಸೋಮಣ್ಣ ಅವರು ಬೆಂಗಳೂರನ್ನೇ ಕಡೆಗಣಿಸಿದರೆ ಹೇಗೆ? ಬೆಂಗಳೂರು ಉಸ್ತುವಾರಿಗಾಗಿ ಹಂಬಲಿಸುವ ಇವರ ಮನ ಜನರ ಕಷ್ಟಕ್ಕೆ ಮಿಡಿಯದಿರುವುದೇಕೆ? ಜನರಿಗೆ ಕಷ್ಟ ಬಂದಾಗ ಬಿಜೆಪಿಗರಿಗೆ ವಿಶ್ರಾಂತಿಯ ಸಮಯವೇ?

ಬೆಂಗಳೂರಿನ ಜನತೆಯ ಮತಬಿಕ್ಷೆ ಪಡೆದು ಜನತೆಗೇ ದ್ರೋಹವೆಸಗುವುದು ಸರಿಯೇ ಸಚಿವರೇ? ಬೆಂಗಳೂರಿನ ಜನತೆ ಮಳೆಯಿಂದ ಕಂಗೆಟ್ಟಿರುವಾಗ 'ನಾನೇ ಸಿಎಂ' ಎನ್ನುವ ಸಚಿವರು ನಾಪತ್ತೆಯಾಗಿದ್ದಾರೆ. ಗಂಡಸ್ಥನವನ್ನು ಕೆಲಸದಲ್ಲಿ ತೋರಿಸಿ ಎಂದವರೇ ಕೆಲಸ ಮಾಡದಿದ್ದರೆ ಏನೆಂದು ಕರೆಯಬೇಕು ಡಾ. ಅಶ್ವತ್ಥ ನಾರಾಯಣ ಅವರೇ? ಎಂದು ಕಾಂಗ್ರೆಸ್ ತಪರಾಕಿ ಹಾಕಿದೆ.

ಬೆಂಗಳೂರಿನ ಮತ್ತೊಬ್ಬ ಸಚಿವರಾದ  ಮುನಿರತ್ನ  ಅವರು ಮಳೆ ಬಂದಾಗಿನಿಂದ ಮನೆಯಿಂದ ಹೊರಬಂದಂತಿಲ್ಲ! ಮುನಿರತ್ನರವರೇ, ಕಮಿಷನ್ ಇಲ್ಲದೆ ತಾವು ಹೊರಬರುವುದಿಲ್ಲವೇ? ಜನರನ್ನು ಕಡೆಗಣಿಸಿರುವ ಇವರಿಗೆ "ಮನಿ ಇದ್ದಲ್ಲಿ ಮಾತ್ರ ಮುನಿ" ಮಾತು ಸೂಕ್ತವಾಗುತ್ತದೆ! ಎಂದು ಕಾಂಗ್ರೆಸ್ ಛೇಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com