ಬಿಎಂಎಸ್ ಟ್ರಸ್ಟ್ ಅಕ್ರಮದಲ್ಲಿ ಸಚಿವ ಅಶ್ವತ್ಥ್ ನಾರಾಯಣ ಕೈವಾಡ: ತನಿಖೆಗೆ ಜೆಡಿಎಸ್ ಆಗ್ರಹ!

ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನ ಅಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್‌ನಾರಾಯಣ ಭಾಗಿಯಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. 
ಜೆಡಿಎಸ್ ಪ್ರತಿಭಟನೆ
ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನ ಅಕ್ರಮಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ್‌ನಾರಾಯಣ ಭಾಗಿಯಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. 

ಪ್ರಕರಣದ ಬಗ್ಗೆ ಸಿಬಿಐ ಇಲ್ಲವೇ ಸಿಓಡಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಸದಸ್ಯರು ಇಂದೂ ಸಹ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದರು. ಹೀಗಾಗಿ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿ ಯಾವುದೇ ಕಲಾಪಗಳು ನಡೆಯದೇ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವಂತಾಯಿತು.

ಇಂದು ಜೆಡಿಎಸ್ ಸದಸ್ಯರ ಧರಣಿಯನ್ನು ಅಂತ್ಯಗೊಳಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಕೊಠಡಿಯಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಸದನ ನಾಯಕರುಗಳ ಸಂಧಾನ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರ ತನಿಖೆಗೆ ಒಪ್ಪಲಿಲ್ಲ. ಇನ್ನು ಜೆಡಿಎಸ್ ಸಹ ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಹೀಗಾಗಿ ಸಂಧಾನ ಸಭೆ ವಿಫಲವಾಗಿದ್ದು ಅಧಿವೇಶನದ ಕೊನೆಯ ದಿನ ಕಲಾಪಗಳು ಸುಗಮವಾಗಿ ನಡೆಯಲಿಲ್ಲ. ಗದ್ದಲ ಕೋಲಾಹಲಗಳ ನಡುವೆಯೇ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.

ಗದ್ದಲದ ನಡುವೆ ಮಾತನಾಡಿದ ಕುಮಾರಸ್ವಾಮಿ ಅವರು ತನಿಖೆ ನಡೆಸಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಇದಕ್ಕೆ ಸಹಮತಿ ಸೂಚಿಸಿದ್ದು ಈ ವಿಚಾರ ಗಂಭೀರದ್ದಾಗಿದೆ. ಜೆಡಿಎಸ್‌ನವರು ಧರಣಿ ನಡೆಸಿರುವುದರಿಂದ ನಾವು ಮಾತನಾಡಲು ಆಗುವುದಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com