ಮುನಿಸು ಮರೆತು ಡಿಕೆಶಿ- ಸಿದ್ದರಾಮಯ್ಯ ಆಲಿಂಗನ: ಬಿರುಕಿಗೆ ಜೋಡೆತ್ತುಗಳ ಬ್ರೇಕ್; ಕೇವಲ ಅಪ್ಪುಗೆಯಲ್ಲ, ಒಗ್ಗಟ್ಟಿನ ಪ್ರಬಲ ಸಂದೇಶ!

ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುನಿಸು ಮರೆತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಸ್ಪರ ಆಲಂಗಿಸಿಕೊಂಡರು.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುನಿಸು ಮರೆತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಸ್ಪರ ಆಲಂಗಿಸಿಕೊಂಡರು.

ಬೃಹತ್ ವೇದಿಕೆಯಲ್ಲಿ ಇಬ್ಬರು ನಾಯಕರು ಅಪ್ಪಿಕೊಂಡು 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ  ತರುವ ಸಂದೇಶ ರವಾನಿಸಿದ್ದಾರೆ.  ಈ ಮೂಲಕ ತಾವು ಒಗ್ಗಟ್ಟಾಗಿದ್ದೇವೆ ಎಂದು ಜನರಿಗೆ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಬಹುಮತ ಗಳಿಸುವ ಪಕ್ಷದ ನೂತನ ಶಾಸಕರು ಮತ್ತು ಹೈಕಮಾಂಡ್ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ ಎಂದು ಇಬ್ಬರೂ ಹೇಳಿಕೆ ನೀಡಿದ್ದರೂ, ಸಿದ್ದರಾಮಯ್ಯ ಅವರ 75 ನೇ ಜನ್ಮದಿನದ ಅಂಗವಾಗಿ ನಡೆದ ‘ಅಮೃತ ಮಹೋತ್ಸವ’ದ ವೇದಿಕೆಯಲ್ಲಿ ನೆರೆದಿದ್ದ ಜನರು  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಘೋಷಣೆಗಳನ್ನು ಕೂಗಿದರು.

ತಮ್ಮ ಮತ್ತು ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯದ ಮಾತುಗಳು ಇತರ ಪಕ್ಷಗಳ "ಭ್ರಮೆ ಮತ್ತು ಸೃಷ್ಟಿ" ಮತ್ತು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ಪ್ರತಿಪಕ್ಷಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಸಿದ್ದರಾಮಯ್ಯ ಅವರು ಎಲ್ಲ ವರ್ಗದ ನಾಯಕರಾಗಿದ್ದು, ಅವರನ್ನು ಹಿಂದುಳಿದ ವರ್ಗದ ನಾಯಕ ಎಂದು ಬಿಂಬಿಸಬಾರದು ಎಂದರು. 2023ರಲ್ಲಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ಉಜ್ವಲ ಅವಕಾಶವಿದ್ದು, ಅದಕ್ಕಾಗಿ ನಾವು ಸಾಮೂಹಿಕವಾಗಿ ಚುನಾವಣೆಗೆ ಹೋಗಬೇಕಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಯೋಜನೆಗಳಿಗೆ ಶೇ 40ರಷ್ಟು ಕಮಿಷನ್ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ನಿಮಗೆ ನಾಚಿಕೆ ಮತ್ತು ಸಂವಿಧಾನದ ಬಗ್ಗೆ ಗೌರವವಿದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಕಳೆದ ಹದಿನೈದು ದಿನಗಳಲ್ಲಿ ಕರಾವಳಿ ಕರ್ನಾಟಕದಲ್ಲಿ ಮೂರು ಹತ್ಯೆಗಳು ನಡೆದಿವೆ, ಆದರೆ ಬೊಮ್ಮಾಯಿ ಮಾತ್ರ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಭೇಟಿ ನೀಡಿದರು, ಇತರ ಇಬ್ಬರು ಕೊಲೆಯಾದ ಯುವಕರ ಕುಟುಂಬಗಳಿಗೆ ಸಾಂತ್ವನ ಹೇಳಲಿಲ್ಲ. ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದ್ದೀರಿ, ಉಳಿದ ಇಬ್ಬರ ಸಂಬಂಧಿಕರಿಗೆ ಏಕೆ ಪರಿಹಾರ ನೀಡಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ರಾಜ್ಯದಲ್ಲಿ 2.42 ಲಕ್ಷ ಕೋಟಿ ಸಾಲ ಇತ್ತು, ಆದರೆ ಈಗ 5.40 ಲಕ್ಷ ಕೋಟಿಗೆ ಏರಿಕೆಯಾಗಿದೆ. 43,000 ಕೋಟಿ ಬಡ್ಡಿಯನ್ನು ಸರ್ಕಾರ ಭರಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com