ಮಾಜಿ ಸಿಎಂ, ಲಿಂಗಾಯತ ಸಮುದಾಯ ಪ್ರಬಲ ನಾಯಕ ಯಡಿಯೂರಪ್ಪ ಮತ್ತೆ ಸಕ್ರಿಯ: 2023ರ ಚುನಾವಣೆಯಲ್ಲಿ ಬಿಜೆಪಿಗೆ ವರವಾಗುತ್ತದೆಯೇ?

2023ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. 
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. 

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜಕೀಯ ಬೆಳವಣಿಗೆಗಳು ಸುಮಾರು ಒಂದು ದಶಕದ ಹಿಂದೆ ರಾಜ್ಯದಲ್ಲಿ ನಡೆದ ಘಟನೆಗಳಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಗುಣಾತ್ಮಕ ಬದಲಾವಣೆ ತರುವ ಸಾಧ್ಯತೆಯಿದೆಯೇ ಎಂಬುದು ಇಲ್ಲಿ ಮುಖ್ಯವಾಗಿದೆ. 

2012ರ ಹೊತ್ತಿಗೆ ಬಿಜೆಪಿ ಸರ್ಕಾರ ಕೊನೆಯಾಗುವ ಹಂತದಲ್ಲಿತ್ತು. ಆಗ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಚಿಗುರುವ ಲಕ್ಷಣ ಕಂಡುಬಂದಿದ್ದವು. ಆ ವರ್ಷ ನವೆಂಬರ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ರಚಿಸಿದ್ದರು. ನಂತರ 2014ರಲ್ಲಿ ಮತ್ತೆ ಬಿಜೆಪಿಗೆ ಬಂದರು. ಅದು ಲೋಕಸಭೆ ಚುನಾವಣೆಗೆ ಮೊದಲು. ಅಷ್ಟು ಹೊತ್ತಿಗೆ ಬಿಜೆಪಿ ಭಾರೀ ಬೆಲೆ ತೆತ್ತು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 5 ವರ್ಷ ಆಳ್ವಿಕೆ ನಡೆಸಿದರು.

ಈಗ ರಾಜ್ಯದ ಇಂದಿನ ರಾಜಕೀಯ ಸ್ಥಿತಿಗೆ ಬರೋಣ. ಬಿಜೆಪಿ ಸರ್ಕಾರ ಈಗಿನ ವಿಧಾನಸಭೆಯ ಕೊನೆಯ ಹಂತದ ಅಧಿಕಾರದಲ್ಲಿದೆ. ಹಲವು ವಿವಾದಗಳು ಬಿಜೆಪಿಯನ್ನು ಸುತ್ತಿಕೊಂಡಿವೆ. ಇದರ ಮಧ್ಯೆ ತಾನು ಮಾಡಿರುವ ಕೆಲಸ, ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಬಿಜೆಪಿ ಹರಸಾಹಸಪಡುತ್ತಿದೆ. ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಯಡಿಯೂರಪ್ಪನವರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪಗಳನ್ನು ಸುಳ್ಳುಮಾಡಿ ಲಿಂಗಾಯತ ಸಮುದಾಯವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಿದೆ.

2012ರಂತೆ ಕಾಂಗ್ರೆಸ್ ಈ ಬಾರಿ ಕೂಡ ಬಿಜೆಪಿಗೆ ಪ್ರಬಲ ಪೈಪೋಟಿಯನ್ನು ಚುನಾವಣೆಯಲ್ಲಿ ನೀಡುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಕೌಂಟರ್ ಕೊಡಲು ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಸಂಸದೀಯ ಮಂಡಳಿಗೆ ಯಡಿಯೂರಪ್ಪನವರನ್ನು ಸೇರ್ಪಡೆ ಮಾಡಿರುವುದು ಹೈಕಮಾಂಡ್ ನ ಬುದ್ದಿವಂತಿಕೆ ನಡೆಯಾಗಿದೆ. ಪಕ್ಷದ ಯೋಜನೆಗಳಲ್ಲಿ ಯಡಿಯೂರಪ್ಪನವರ ಪಾತ್ರ ಮುಖ್ಯವಾಗಿದೆ ಎಂದು ಸಂದೇಶ ಸಾರುವುದು ಕೂಡ ಕೇಂದ್ರ ನಾಯಕರ ನಡೆಗೆ ಕಾರಣವಾಗಿದೆ. ಲಿಂಗಾಯತ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳನ್ನು ಕಟ್ಟಿಹಾಕುವ ಬಿಜೆಪಿ ನಾಯಕರ ನಡೆ ಕೂಡ ಆಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎಂಬ ಇಬ್ಬರು ಪ್ರಬಲ ನಾಯಕರನ್ನು ತೆಗೆದುಹಾಕುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಸೇರಿಸುವ ಬಿಜೆಪಿ ಕೇಂದ್ರ ನಾಯಕತ್ವದ ನಿರ್ಧಾರವು ಬಿಜೆಪಿಯ ಚುನಾವಣಾ ತಂತ್ರದಲ್ಲಿ ಯಡಿಯೂರಪ್ಪನವರ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.

ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಯಡಿಯೂರಪ್ಪ ಹೇಳುತ್ತಿದ್ದರೂ, ಇತ್ತೀಚಿನ ಕ್ರಮವು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತೋರಿಸುತ್ತದೆ. ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಮೂಲಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸೇರಿದಂತೆ ಎಲ್ಲಾ ಪ್ರಮುಖ ನಿರ್ಧಾರಗಳಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹೊಂದಿರುತ್ತಾರೆ.

ಮುಂದಿನ ತಿಂಗಳುಗಳಲ್ಲಿ, ಯಡಿಯೂರಪ್ಪ ಪಕ್ಷದ ಚುನಾವಣಾ ತಂತ್ರಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ.

ಪಕ್ಷದ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವ ಯತ್ನ, ಯಡಿಯೂರಪ್ಪನವರಿಗೆ ಸ್ಥಾನ ಬಿಜೆಪಿಗೆ ಗೇಮ್ ಚೇಂಜರ್ ಆಗಬಹುದೇ?: ಈ ಹಿಂದಿನಂತೆ ಯಡಿಯೂರಪ್ಪನವರು ಬಿಜೆಪಿಯಲ್ಲಿ ಈಗ ಸಿಎಂ ಅಭ್ಯರ್ಥಿಯಲ್ಲ. ಈಗ ಬಿಜೆಪಿಯ ಕಾರ್ಯಶೈಲಿ ಸಂಪೂರ್ಣ ಬದಲಾಗಿದೆ. ಕೇಂದ್ರ ನಾಯಕತ್ವ ನೇರ ಹಸ್ತಕ್ಷೇಪವಿದೆ. ಯಡಿಯೂರಪ್ಪನವರನ್ನು ಕೇಂದ್ರ ಸಂಸದೀಯ ಮಂಡಳಿಗೆ ಸೇರಿಸಿದ್ದು ಪಕ್ಷದೊಳಗೆ ವಿವಿಧ ವರ್ಗಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಮುಖ್ಯವಾಗುತ್ತದೆ. ಆಡಳಿತ ಪಕ್ಷದ ಕಾರ್ಯತಂತ್ರದಲ್ಲಿನ ಬದಲಾವಣೆಯು ಕಾಂಗ್ರೆಸ್ ಮೇಲೆ ಏರಿಳಿತವನ್ನು ಬೀರುವ ಸಾಧ್ಯತೆಯಿದೆ, ಅದು ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ.

ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯನ್ನು ಪೋಷಿಸುತ್ತಿರುವ ಕಾಂಗ್ರೆಸ್ ನಾಯಕರ ನಡುವಿನ ಸಂಭವನೀಯ ಭಿನ್ನಾಭಿಪ್ರಾಯಗಳ ಮೇಲೆ ಬಿಜೆಪಿಯು ಹಣಾಹಣಿ ನಡೆಸುತ್ತಿದ್ದರೆ, ಹಳೆಯ ಪಕ್ಷವು ಬಿಜೆಪಿ ಇರುವ ಪರಿಸ್ಥಿತಿಯನ್ನು ಹೆಚ್ಚು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸ್ವಲ್ಪ ಮಟ್ಟಿಗೆ, ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ವಿಧಾನ ಪರಿಷತ್ ಚುನಾವಣೆಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಇತ್ತೀಚೆಗೆ ಮೇಲುಗೈ ಸಾಧಿಸಿತ್ತು.

ಮಾಜಿ ಸಚಿವ ಎಂ.ಬಿ.ಪಾಟೀಲ್ ಕಾಂಗ್ರೆಸ್ ನಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಪ್ರಮುಖ ಲಿಂಗಾಯತ ಮಠಕ್ಕೆ ಭೇಟಿ ನೀಡಿದ್ದು, ವೀರಶೈವ-ಲಿಂಗಾಯತ ವಿಚಾರವಾಗಿ ಕಾಂಗ್ರೆಸ್ ನ ಹಿರಿಯ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಲಿಂಗಾಯತರ ಮನಸ್ಸನ್ನು ಗೆಲ್ಲಲು ಪಕ್ಷದ ಸಂಘಟಿತ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ.

ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತದೆಯಾದರೂ, ಪಕ್ಷವು ತನ್ನ ಸಾಂಪ್ರದಾಯಿಕ ಬೆಂಬಲದ ಆಧಾರದ ಮೇಲೆ ಹೆಚ್ಚು ಅವಲಂಬಿತವಾಗಿದೆ ಅದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು - ಈ ಮೂರು ಸಮುದಾಯಗಳು ಕಾಂಗ್ರೆಸ್ ನ್ನು ಇಂದು ರಾಜ್ಯದಲ್ಲಿ ಹಿಂದಿನಂತೆ ಬೆಂಬಲಿಸುವುದು ಕಂಡುಬರುತ್ತಿಲ್ಲ. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ಪೂರ್ಣಪ್ರಮಾಣದಲ್ಲಿ ತೊಡಗಿದ್ದು, ಶಿವಕುಮಾರ್ ಒಕ್ಕಲಿಗ ಸಮುದಾಯದ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಮೂರನೇ ಆಯಾಮವನ್ನು ತರುವ ಜನತಾ ದಳ (ಜಾತ್ಯತೀತ) ಕೂಡ ಅದೇ ಅಂಶಗಳನ್ನು ಆಧರಿಸಿದೆ. ಹಳೇ ಮೈಸೂರಿನಲ್ಲಿ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ ಪ್ರಯತ್ನ ನಡೆಸುತ್ತಿದ್ದರೆ, ಪಕ್ಷವು ಅಲ್ಪಸಂಖ್ಯಾತರನ್ನು ಓಲೈಸಲು ಪ್ರಯತ್ನಿಸುತ್ತಿದೆ. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿರುವುದು ಅದರ ಕಾರ್ಯತಂತ್ರದ ಸ್ಪಷ್ಟ ಸೂಚನೆಯಾಗಿದೆ.

2023ರ ಚುನಾವಣೆಗೆ ಮೂರೂ ಪಕ್ಷಗಳು ತನ್ನದೇ ರೀತಿಯಲ್ಲಿ ಯತ್ನ ನಡೆಸುತ್ತಿದ್ದರೆ ಯಡಿಯೂರಪ್ಪನವರ ಬಡ್ತಿ ಬಿಜೆಪಿ ಪಕ್ಷದೊಳಗೆ ಸಂಚಲನ ತರುವುದರಲ್ಲಿ ಸಂಶಯವಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com