ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಕೋರ್ಟ್ ನಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತೆ- ಕೆ.ಎಸ್ ಈಶ್ವರಪ್ಪ
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕ್ಲೀನ್ ಚಿಟ್ ಸಿಗುವುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
Published: 25th August 2022 10:20 AM | Last Updated: 25th August 2022 12:56 PM | A+A A-

ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕ್ಲೀನ್ ಚಿಟ್ ಸಿಗುವುದಾಗಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತಾನಾಡಿದ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ನನ್ನ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡದಿದ್ರೇ ತಪ್ಪಾಗುತ್ತದೆ. ಎಫ್ಐಆರ್ ದಾಖಲಾಗಿದೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೆ. ಸಂತೋಷ್ ಪತ್ನಿ ಜಯಶ್ರೀ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿರುವುದನ್ನು ವೃತ್ತ ಪತ್ರಿಕೆಗಳಲ್ಲಿ ಓದು ತಿಳಿದುಕೊಂಡಿದ್ದೇನೆ, ಸಂತ್ರಸ್ತರ ಕುಟುಂಬಕ್ಕೆ ಕೋರ್ಟ್ ಗೆ ಹೋಗುವ ಅಧಿಕಾರವಿದೆ, ತಮ್ಮ ವಿರುದ್ಧ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುವವರೆಗೆ ಕಾಯುತ್ತೇನೆ ಮತ್ತು ಪ್ರಕರಣವು ಸುಪ್ರೀಂ ಕೋರ್ಟ್‌ಗೆ ಹೋದರೂ ಯಾವುದೇ ಅಭ್ಯಂತರವಿಲ್ಲ ಎಂದು ಬಿಜೆಪಿ ನಾಯಕ ಹೇಳಿದರು. ಸಂತೋಷ್ ಗೂ ನನಗೂ ಸಂಬಂಧವೇ ಇಲ್ಲ ಎಂದು ಯಾರಿಗೆ ಹೇಳಬೇಕೋ ಹೇಳಿದ್ದೇನೆ. ತನಿಖಾಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟಪಡಿಸಿದ್ದೇನೆ ಎಂದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್; ದುರ್ದೈವದ ಸಂಗತಿ ಎಂದ ಕಾಂಗ್ರೆಸ್
ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂದು ತನಿಖೆಯ ರಿಪೋರ್ಟ್ ನಿಂದ ಗೊತ್ತಾಗಬೇಕು. ಅದು ನನಗೆ ಗೊತ್ತಿಲ್ಲ. ಒಟ್ಟಾರೆ ವಾಟ್ಸಪ್ ನಲ್ಲಿ ನನ್ನ ಹೆಸರಿತ್ತು. ರಾಷ್ಟ್ರೀಯ ನಾಯಕರ ಅನುಮತಿ ಪಡೆದು, ರಾಜೀನಾಮೆ ಕೊಟ್ಟೆ. ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿತು. ಮುಕ್ತವಾಗಿ ಹೊರಬಂದಿದ್ದೇನೆ. ಅವರಿಗೆ ಕೋರ್ಟ್ ಹೋಗುವ ಅಧಿಕಾರ ಇದೆ ಹೋಗಿದ್ದಾರೆ. ಕೋರ್ಟ್ ನಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ಹೇಳಿದರು.