'ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಬಿಟ್ಟರೆ ಯಾರಿದ್ದಾರೆ ಹೇಳಿ, ನನಗೆ ಪರ್ಯಾಯ ನಾಯಕ ಕಾಣುತ್ತಿಲ್ಲ': ಮಲ್ಲಿಕಾರ್ಜುನ ಖರ್ಗೆ

ರಾಹುಲ್ ಗಾಂಧಿ ಅವರನ್ನು ಬಿಟ್ಟು ಬೇರೆ ಯಾರೂ ಕಾಂಗ್ರೆಸ್ ನಲ್ಲಿ ದೇಶ ಮಟ್ಟದಲ್ಲಿ ನಾಯಕನ ವರ್ಚಸ್ಸು, ಖ್ಯಾತಿ ಗಳಿಸಿರುವ ನಾಯಕ ಇಲ್ಲದ ಕಾರಣ ಅವರನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಮನವೊಲಿಸಲಾಗುವುದು ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಬಿಟ್ಟು ಬೇರೆ ಯಾರೂ ಕಾಂಗ್ರೆಸ್ ನಲ್ಲಿ ದೇಶ ಮಟ್ಟದಲ್ಲಿ ನಾಯಕನ ವರ್ಚಸ್ಸು, ಖ್ಯಾತಿ ಗಳಿಸಿರುವ ನಾಯಕ ಇಲ್ಲದ ಕಾರಣ ಅವರನ್ನು ಮತ್ತೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಮನವೊಲಿಸಲಾಗುವುದು ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಕ್ಷವನ್ನು ಮುನ್ನಡೆಸುವವರು ಇಡೀ ದೇಶಕ್ಕೆ ಚಿರಪರಿಚಿತನಾಗಿರಬೇಕು. ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ, ಪಶ್ಚಿಮ ಬಂಗಾಳದಿಂದ ಹಿಡಿದು ಗುಜರಾತ್ ವರೆಗೆ ಪರಿಚಿತನಾಗಿರಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಹುಲ್ ಗಾಂಧಿಯವರು ಇಡೀ ದೇಶಕ್ಕೆ ಚಿರಪರಿಚಿತರು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಂದ ಸ್ವೀಕೃತವಾಗಿರುವ ನಾಯಕರು, ಅವರು ಬಿಟ್ಟರೆ ಬೇರೊಬ್ಬ ನಾಯಕರು ಸದ್ಯಕ್ಕೆ ಪಕ್ಷದಲ್ಲಿಲ್ಲ ಎಂದು ನಿನ್ನೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಹಿಂದೆ ಸೋನಿಯಾ ಗಾಂಧಿಯವರನ್ನು ಪಕ್ಷದ ನಾಯಕರೆಲ್ಲರೂ ಕರೆದುಕೊಂಡು ಬಂದು ಪಕ್ಷ ಮುನ್ನಡೆಸಬೇಕೆಂದು ಒತ್ತಾಯಿಸಿದ್ದನ್ನು ನೆನಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರನ್ನು ಅದೇ ರೀತಿ ಪಕ್ಷವನ್ನು ಮುನ್ನಡೆಸಿ ಹೋರಾಡಿ ಎಂದು ಮನವಿ ಮಾಡಿಕೊಂಡರು. 

ರಾಹುಲ್ ಗಾಂಧಿ ಬಿಟ್ಟರೆ ಯಾರಿದ್ದಾರೆ ಹೇಳಿ, ನನಗೆ ಬೇರೊಬ್ಬರು ಕಾಣಿಸುತ್ತಿಲ್ಲ ಎಂದು ಖರ್ಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧರಿಲ್ಲ ಎಂಬ ವರದಿಗಳ ಕುರಿತು, ಖರ್ಗೆ ಅವರು "ಪಕ್ಷಕ್ಕಾಗಿ, ದೇಶಕ್ಕಾಗಿ, ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಹೋರಾಡಲು ಮತ್ತು ದೇಶವನ್ನು ಉಳಿಸಿಕೊಳ್ಳಲು ಅಧಿಕಾರ ವಹಿಸಿಕೊಳ್ಳುವಂತೆ ಅವರನ್ನು ವಿನಂತಿಸಿಕೊಳ್ಳಲಾಗುವುದು ಎಂದರು. 

ಪಕ್ಷದ ಮುಂಬರುವ "ಭಾರತ್ ಜೋಡೋ ಯಾತ್ರೆ" ಬಗ್ಗೆಯೂ ಉಲ್ಲೇಖಿಸಿದ ಖರ್ಗೆ, 'ಜೋಡೋ ಭಾರತ್'ಗೆ ರಾಹುಲ್ ಗಾಂಧಿ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ದಿನಾಂಕಗಳ ವೇಳಾಪಟ್ಟಿಯನ್ನು ಅನುಮೋದಿಸಲು ನಾಳೆ ವರ್ಚುವಲ್ ಸಭೆ ನಡೆಸಲಿದೆ. ಸಿಡಬ್ಲ್ಯೂಸಿ ಸಭೆಯ ಅಧ್ಯಕ್ಷತೆಯನ್ನು ಸೋನಿಯಾ ಗಾಂಧಿ ವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com