ಖರ್ಗೆ ಭೇಟಿ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿಯಾದ ಎಚ್ ವಿಶ್ವನಾಥ್, ಕುತೂಹಲ ಮೂಡಿಸಿದ 'ಹಳ್ಳಿ ಹಕ್ಕಿ' ನಡೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ರಾಜಕೀಯ ಚಟುವಟಿಕೆಗಳೂ ಗರಿಗೆದರುತ್ತಿವೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು...
ಸಿದ್ದರಾಮಯ್ಯ ಭೇಟಿಯಾದ ಎಚ್ ವಿಶ್ವನಾಥ್
ಸಿದ್ದರಾಮಯ್ಯ ಭೇಟಿಯಾದ ಎಚ್ ವಿಶ್ವನಾಥ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ರಾಜಕೀಯ ಚಟುವಟಿಕೆಗಳೂ ಗರಿಗೆದರುತ್ತಿವೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಿದ್ದು, ಹಳ್ಳಿ ಹಕ್ಕಿ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಗೂಡಿಗೆ ಸೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ಈ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡು ಜೆಡಿಎಸ್ ಸೇರಿದ್ದ ಎಚ್.ವಿಶ್ವನಾಥ್ ಇಂದು ಮತ್ತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಮಾಜಿ ಸಚಿವರಾದ ಎಚ್ ವಿಶ್ವಾನಾಥ್ ಅವರು ಇಂದು ನನ್ನನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು ಎಂದು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್ ವಿಶ್ವನಾಥ್ ಅವರು, ಸಿದ್ದರಾಮಯ್ಯ, ನಾವು ಕಾಂಗ್ರೆಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ಸಿದ್ದರಾಮಯ್ಯ ನಮ್ಮ ಮೈಸೂರು ಭಾಗದ ನಾಯಕರು. ಆರೋಗ್ಯ ಸರಿ ಇಲ್ಲದಿದ್ದಾಗ ಯಾರೇ ಆಗಲಿ ಭೇಟಿ ಮಾಡಿ ವಿಚಾರಿಸೋದು ರಾಜಕೀಯ ಸಹಿಷ್ಣುತೆ ಎಂದರು.

ಸಿದ್ದರಾಮಯ್ಯ ನಾನು ಬಹಳ ವರ್ಷ ಒಟ್ಟಿಗೆ ರಾಜಕಾರಣದಲ್ಲಿ ಇದ್ದವರು. ಬೇಗ ಚೇತರಿಸಿಕೊಳ್ಳಿ ಅಂತ ಹಾರೈಸಿ ಹೊರಟಿದ್ದೇನೆ. ದೆಹಲಿಗೆ ಹೋಗಿದ್ದಾಗ ಖರ್ಗೆಯವರು ಹೆಡ್ ಕ್ವಾಟ್ರಸ್ ನಲ್ಲಿದ್ದಾರೆ ಅಂತ ಗೊತ್ತಾಯ್ತು. ಅಭಿಮಾನದಿಂದ ನಾನು ಖರ್ಗೆಯವರಿಗೆ ಅಭಿನಂದನೆ ಹೇಳಲು ಭೇಟಿಯಾಗಿದ್ದೆ ಎಂದರು.

ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ ರಾಜಕಾರಣ ನಿಂತ ನೀರಲ್ಲ, ಅದೊಂದು ಹರಿಯುವ ನೀರು ಇದ್ದಂತೆ. ಮುಂದೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಹೇಳುವ ಮೂಲಕ ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್ ಗೂಡು ಸೇರುವ ಸುಳಿವು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com