ಗಣಿಧಣಿ ಜನಾರ್ದನ ರೆಡ್ಡಿ ರಾಜಕೀಯ ಸೆಕೆಂಡ್ ಇನ್ನಿಂಗ್ಸ್ ಗಂಗಾವತಿಗೆ ಶಿಫ್ಟ್?: ರೆಡ್ಡಿ ಅನುಪಸ್ಥಿತಿಯಲ್ಲಿ ನೂತನ ಗೃಹ ಪ್ರವೇಶ

ಬಿಜೆಪಿ ಮಾಜಿ ಸಚಿವ ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಿಂದ ರಾಜಕೀಯದ ಮತ್ತೊಂದು ಎರಡನೇ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. 
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ನೂತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿ
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ನೂತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿ

ಗಂಗಾವತಿ (ಕೊಪ್ಪಳ ಜಿಲ್ಲೆ): ಬಿಜೆಪಿ ಮಾಜಿ ಸಚಿವ ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಿಂದ ರಾಜಕೀಯದ ಮತ್ತೊಂದು ಎರಡನೇ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. 

ಇದರ ಆರಂಭವಾಗಿ ನಾಂದಿಯಾಗಿ ಇಂದು ಗಂಗಾವತಿಯಲ್ಲಿ ಅವರ ನೂತನ ಗೃಹಪ್ರವೇಶ ಸಮಾರಂಭ ಏರ್ಪಟ್ಟಿದೆ. ವಿಶೇಷವೆಂದರೆ ಜನಾರ್ದನ ರೆಡ್ಡಿಯವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಅರುಣಾ ಲಕ್ಷ್ಮಿ ಪುರೋಹಿತರ ನೇತೃತ್ವದಲ್ಲಿ ಗೃಹ ಪ್ರವೇಶ ಶಾಸ್ತ್ರ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು, ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದಾರೆ. 

ಜನಾರ್ದನ ರೆಡ್ಡಿಯವರು ಹೊಸ ಪಕ್ಷ ಆರಂಭಿಸುತ್ತಿದ್ದು ಅವರು ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗೃಹ ಪ್ರವೇಶ ನಂತರ ಮಾತನಾಡುತ್ತೇನೆ, ತಮ್ಮ ಯೋಜನೆಗಳನ್ನು ಬಹಿರಂಗಪಡಿಸುತ್ತೇನೆ ಎಂದು ಇತ್ತೀಚೆಗೆ ಜನಾರ್ದನ ರೆಡ್ಡಿ ಹೇಳಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಜನಾರ್ದನ ರೆಡ್ಡಿ ಅವರಿಗೆ ಜನರೇ ತಂದೆ ತಾಯಿ. ದೇವಾನುದೇವತೆಗಳೇ ಕಾಡಿಗೆ ಹೋಗಿ ವನವಾಸ ಅನುಭವಿಸಿ ಹಾಗೂ ಇತರ ಕಷ್ಟಗಳನ್ನು ಕಂಡಿದ್ದಾರೆ. ಇನ್ನು ನಮ್ಮಂಥ ಸಾಮಾನ್ಯ ಮನುಷ್ಯರು ಯಾವ ಲೆಕ್ಕ. ಜನಾರ್ದನ ರೆಡ್ಡಿಗೆ 14 ವರ್ಷ ವನವಾಸವಿದೆ, ಅನೇಕ ಕಷ್ಟಗಳನ್ನು ಎದುರಿಸಿರುವ ಅವರು ಈಗ ಬಳ್ಳಾರಿಯಿಂದ ಹತ್ತಿರ ಎನ್ನುವ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದಾರೆ ಎಂದಿದ್ದಾರೆ.

ರಾಜಕೀಯ ಕುರಿತು ಜನಾರ್ದನ ರೆಡ್ಡಿ ಮುಂದಿನ ವಾರ ವಿವರಿಸಲಿದ್ದಾರೆ, 14 ವರ್ಷದ ನಂತರ ಈಗ ಜನಸೇವೆ ಮಾಡಬೇಕೆಂದಿದ್ದಾರೆ. ಸಿಂಧನೂರಿನಿಂದ ಸ್ಪರ್ಧೆಯ ಬಗ್ಗೆ ಜನಾರ್ದನ ರೆಡ್ಡಿ ಹೊಸ ಮನೆಗೆ ಬಂದ ಬಳಿಕ ತಿಳಿಸಲಿದ್ದಾರೆ ಎಂದರು. 

ಜನಾರ್ದನ ರೆಡ್ಡಿ ಆಪ್ತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಹೊಸ ಪಕ್ಷ ಕಟ್ಟುವ ಕಾರ್ಯವನ್ನು ಭರದಿಂದ ನಡೆಸುತ್ತಿದ್ದು ದೆಹಲಿಯಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆ ಕೆಲಸದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com