ಭಯೋತ್ಪಾದಕರ ಮೇಲಿನ ಕಾಂಗ್ರೆಸ್ ಪ್ರೇಮ ಜಗಜ್ಜಾಹೀರು ಮಾಡಿದ ಡಿಕೆಶಿ: ನಳಿನ್‍ಕುಮಾರ್ ಕಟೀಲ್

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಬೈಯ್ಯುವ ಭರದಲ್ಲಿ ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಜಗಜ್ಜಾಹೀರು ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್
Updated on

ಬೆಂಗಳೂರು: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಬೈಯ್ಯುವ ಭರದಲ್ಲಿ ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಜಗಜ್ಜಾಹೀರು ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ದೇಶದ ಭದ್ರತೆ, ಏಕತೆ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವುದು ಇದೇ ಮೊದಲಲ್ಲ. ಮಂಗಳೂರಿನ ಕುಕ್ಕರ್ ಬಾಂಬ್ ವಿಚಾರ ಭಯೋತ್ಪಾದನೆಗೆ ಸಮಾನವಲ್ಲ ಎಂದು ಮಾತನಾಡುವ ಇವರು ಅಧಿಕಾರಕ್ಕೆ ಬರದಂತೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಪೂರ್ಣಪ್ರಮಾಣದಲ್ಲಿ ಮೂಲೆಗುಂಪು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಬಾಟ್ಲಾ ಹೌಸ್ ಪ್ರಕರಣದಲ್ಲಿ ಕಾಂಗ್ರೆಸ್‍ನ ಅಂದಿನ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರು ಉಗ್ರರನ್ನು ಎನ್‍ಕೌಂಟರ್ ಮಾಡಿದ್ದಕ್ಕಾಗಿ ಅತ್ತಿದ್ದುದು ನೆನಪಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹಿಂದೊಮ್ಮೆ ನೆಹರೂ ಮತದ ಲಾಭಕ್ಕಾಗಿ ಉರ್ದುವಿನಲ್ಲಿ ತನ್ನ ಮದುವೆ ಆಮಂತ್ರಣಪತ್ರವನ್ನು ಮುದ್ರಿಸಿದ್ದರು. ರಾಜೀವ್ ಗಾಂಧಿ ಕೂಡ ಭಿಂದ್ರನ್‍ ವಾಲೆಯನ್ನು ಒಬ್ಬ ಸಂತ ಎಂದು ಕರೆದಿದ್ದರು ಎಂದು ನೆನಪಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗ ಸ್ಥಿತಿಯಲ್ಲಿತ್ತು. ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಂಡಿದ್ದು, ಎಲ್ಲೆಡೆ ಅವರ ವಿರುದ್ಧ ಜನಾಭಿಪ್ರಾಯ ಮೂಡಿದೆ ಎಂದು ತಿಳಿಸಿದ್ದಾರೆ.

ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯ ಚುನಾವಣೆ, ಗುಜರಾತ್ ಚುನಾವಣೆಯಲ್ಲಿ ಜನರು ಬಿಜೆಪಿ ಪರ ನಿಂತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲು ಗನಸು ಕಾಣುತ್ತಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಅದು ತಿರುಕನ ಕನಸು ಎಂಬುದರ ಅರಿವಾಗಿದೆ. ಆದ್ದರಿಂದಲೇ ಅವರು ಭಯೋತ್ಪಾದಕರ ಪರ ನಿಂತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ದೇಶದ ಸೈನಿಕರ ಪರ ನಿಲ್ಲದೆ, ರಕ್ಷಣಾ ವಿಚಾರದಲ್ಲೂ ಸಾಕ್ಷಿ ಕೇಳುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ. ಇದೀಗ ಭಯೋತ್ಪಾದಕರ ಪರ ನಿಂತು ತನ್ನ ಲಜ್ಜೆಗೇಡಿ ವರ್ತನೆಯನ್ನು ಮುಂದುವರಿಸಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಭಯೋತ್ಪಾದನೆಯಂಥ ವಿಚಾರದಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ಸಿಗರ ಹೇಯ ಮನಸ್ಥಿತಿಯನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com