ಎಡಿಜಿಪಿ ಅಮೃತ್ ಪೌಲ್ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪೌಲ್ ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಯಕ ಸಿದ್ದರಾಮಯ್ಯ ಅವರು ಮಂಗಳವಾರ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪೌಲ್ ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಯಕ ಸಿದ್ದರಾಮಯ್ಯ ಅವರು ಮಂಗಳವಾರ ಒತ್ತಾಯಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ಈ ಹಗರಣದ ಬಗ್ಗೆ ನಾವು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ವಿ. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಿಎಂ ಹಾಗೂ ಹೋಮ್ ಮಿನಿಸ್ಟರ್ ಹೇಳಿದ್ರು. ಹೋಮ್ ಮಿನಿಸ್ಟರ್ ವೀರಾವೇಶದಿಂದ ಉತ್ತರ ಕೊಟ್ಟಿದ್ರು. ಸದ್ಯ ಇದೇ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗಿ ಸಸ್ಪೆಂಡ್ ಕೂಡ ಆಗಿದ್ದಾರೆ. ಇದರ ಬಗ್ಗೆ ಇವಾಗ ಏನು ಹೇಳ್ತಾರೆ ಹೋಮ್ ಮಿನಿಸ್ಟರ್ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಎಡಿಜಿಪಿ ಅವ್ರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತನ್ನ ಬೆನ್ನು ತಾವೆ ತಟ್ಟಿಕೊಳ್ಳುತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಪಿಎಸ್ಐ ಹಗರಣ ನಡೆದಿಲ್ಲ ಎಂದು ಜನರಿಗೆ ಸುಳ್ಳು ಹೇಳಿದ್ದಾರೆ. ಇವರು ಮಂತ್ರಿ ಸ್ಥಾನಕ್ಕ ಯೋಗ್ಯವಲ್ಲ. ಕೂಡಲೇ ಹೋಮ್ ಮಿನಿಸ್ಟರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಹೋಮ್ ಮಿನಿಸ್ಟರ್ ಸುಳ್ಳು ಹೇಳಿಕೆ ಕೊಡ್ತಾರೆ. ಈ ಪ್ರಕರಣ ಮುಚ್ಚಿ ಹಾಕಬೇಕು ಅನ್ನೋದು ಇವರ ಉದ್ದೇಶ. ಸರ್ಕಾರ ಏಪ್ರಿಲ್ ನಲ್ಲಿ ಈ ಹಗರಣವನ್ನು ಸಿಐಡಿಗೆ ಕೊಟ್ಟಿದ್ದಾರೆ. ಮಾರ್ಚ್ ನಲ್ಲಿ ಇದರ ಬಗ್ಗೆ ನಾವು ಮಾತಾಡಿದ್ವಿ. ಇದರಲ್ಲಿ ದೊಡ್ಡ ದೊಡ್ಡ ಮಂತ್ರಿಗಳಿದ್ದಾರೆ ಎಂದು ಹೇಳಿದ್ದೆ. ಕೇವಲ ಸಿಐಡಿ ತನಿಖೆ ಮಾಡಿದ್ರೆ ಸಾಕಾಗಲ್ಲ. ಏಕೆಂದರೆ ಇದರಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ. ನ್ಯಾಯಾಂಗ ತನಿಖೆಯಾಗಬೇಕು ಎಂದು ನಾನು ಹೇಳಿದ್ದೆ. ಸುಪ್ರೀಂ ಕೋರ್ಟ್ ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ಆಗಬೇಕು ಅಂದಿದ್ದೆ. ಆದ್ರೆ ಇವ್ರು ಸಿಐಡಿ ತನಿಖೆ ಮಾಡಿದ್ದಾರೆ ಅಷ್ಟೇ. ನಾವು ಸಚಿವ ಡಾ.ಅಶ್ವತ್ಥ್ ನಾರಾಯಣ ಮೇಲೆ ಕೂಡ ಆರೋಪ ಮಾಡಿದ್ದೇವೆ. ಅಶ್ವತ್ಥ್ ನಾರಾಯಣ ಸಹೋದರ ಕೂಡ ಇದ್ರಲ್ಲಿ ಭಾಗಿಯಾಗಿದ್ದಾರೆ. ಇವಾಗ ಸಿಐಡಿ ಅವ್ರು ಸಚಿವ ಅಶ್ವತ್ಥ್ ನಾರಾಯಣ ಅವರನ್ನು ಅರೆಸ್ಟ್ ಮಾಡ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com