ರಾಷ್ಟ್ರಪತಿ ಚುನಾವಣೆ: ದೇವೇಗೌಡರನ್ನು ಭೇಟಿಯಾಗದೆ ತೆರಳಿದ ಯಶ್ವಂತ್ ಸಿನ್ಹಾ; ದ್ರೌಪದಿ ಮುರ್ಮುಗೆ ಸಿಗುತ್ತಾ ಗೌಡರ ಅಪಾಯಿಟ್ಮೆಂಟ್?
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ತಮ್ಮ ಪ್ರಚಾರದ ಭಾಗವಾಗಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
Published: 09th July 2022 09:40 AM | Last Updated: 09th July 2022 12:54 PM | A+A A-

ಎಚ್.ಡಿ ದೇವೇಗೌಡ
ಬೆಂಗಳೂರು: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ತಮ್ಮ ಪ್ರಚಾರದ ಭಾಗವಾಗಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಸರ್ವೋಚ್ಛ ನಾಯಕ ಎಚ್‌ಡಿ ದೇವೇಗೌಡರನ್ನು ಭೇಟಿ ಮಾಡುತ್ತಾರೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ದ್ರೌಪದಿ ಮುರ್ಮು ಬಿಜೆಪಿ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಪಾಲ್ಗೋಳ್ಳಬೇಕಾದ ಕಾರಣ ಈಗಾಗಲೇ ಶೆಡ್ಯೂಲ್ ಪೂರ್ಣವಾಗಿದೆ ಎಂದು ಹೇಳಲಾಗಿದೆ. ಸಮಯ ಸಿಕ್ಕರೆ ಮತ್ತು ದೇವೇಗೌಡರು ಅವರಿಗೆ ಅಪಾಯಿಂಟ್ಮೆಂಟ್ ಕೊಟ್ಟರೆ, ಭೇಟಿ ಮಾಡಬಹುದು. ಇಲ್ಲದಿದ್ದರೆ, ಈಗಾಗಲೇ ಜೆಡಿಎಸ್ ಮುರ್ಮು ಅವರಿಗೆ ನೈತಿಕ ಬೆಂಬಲ ಘೋಷಿಸಿರುವ ಕಾರಣ ಸೌಜನ್ಯಕ್ಕಾಗಿ ಫೋನ್‌ನಲ್ಲಿ ಮಾತನಾಡುವ ಸಾಧ್ಯತೆಯಿದೆ ಎಂದು ಮೂಲಗಳ ತಿಳಿಸಿವೆ.
ರಾಷ್ಟ್ರಪತಿ ಚುನಾವಣೆ ವಿಚಾರವಾಗಿ ಗೌಡರು ತಮ್ಮ ಪುತ್ರ ಹಾಗೂ ಜೆಡಿಎಸ್‌ನ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ವಹಿಸಿದ್ದು, ಮುರ್ಮು ಅವರಿಗೆ ಪಕ್ಷದ ಬೆಂಬಲ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಕೂಡಲೇ ದ್ರೌಪದಿ ಮುರ್ಮು ದೇವೇಗೌಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರು ತಮ್ಮ ನೈತಿಕ ಬೆಂಬಲವನ್ನು ಕೋರಿದ್ದಾರೆ ಎಂದು ವರದಿಯಾಗಿದೆ.
ದ್ರೌಪದಿ ಮುರ್ಮು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ಕೇಳಿದಾಗ, ಅದು ಅಗತ್ಯವಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೂನ್ 15 ರಂದು ನವದೆಹಲಿಯಲ್ಲಿ ಎನ್‌ಡಿಎಯೇತರ ಪಕ್ಷಗಳ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಪಾಲ್ಗೋಂಡಿದ್ದ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಹಾಜರಾಗಿದ್ದರು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ವಿರುದ್ದ ಎನ್ ಡಿಎ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದ ನಂತರ ಜೆಡಿಎಸ್ ತನ್ನ ನಿರ್ಧಾರ ಬದಲಿಸಿದೆ.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಯಶ್ವಂತ್ ಸಿನ್ಹಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಶಾಸಕರ ಬೆಂಬಲ ಪಡೆದರು. ಆದರೆ ದೇವೇಗೌಡರನ್ನು ಭೇಟಿಯಾಗದೆ ದೆಹಲಿಗೆ ಮರಳಿದರು.
ಯಶ್ವಂತ್ ಸಿನ್ಹಾ ಮತ್ತು ದೇವೇಗೌಡರ ಸಂಬಂಧ ಉತ್ತಮವಾಗಿಲ್ಲ, ಆದ್ದರಿಂದ ಸಭೆಯು ಕಾರ್ಯರೂಪಕ್ಕೆ ಬರಲಿಲ್ಲ. ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಗೌಡರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೂ, ಸಿನ್ಹಾ ಅವರನ್ನು ದೇವೇಗೌಡರು ಬೆಂಬಲಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.