ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷ ನಾಯಕರ ಸಭೆ ಜುಲೈ 17ಕ್ಕೆ ಮುಂದೂಡಿಕೆ - ಮಲ್ಲಿಕಾರ್ಜುನ ಖರ್ಗೆ
ರಾಷ್ಟ್ರಪತಿ ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಜುಲೈ 13 ರಂದು ಕರೆಯಲಾಗಿದ್ದ ಸಮಾನ ಮನಸ್ಕ ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಜುಲೈ 17ಕ್ಕೆ ಮುಂದೂಡಲಾಗಿದೆ...
Published: 11th July 2022 08:05 PM | Last Updated: 11th July 2022 08:05 PM | A+A A-

ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ: ರಾಷ್ಟ್ರಪತಿ ಚುನಾವಣೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಜುಲೈ 13 ರಂದು ಕರೆಯಲಾಗಿದ್ದ ಸಮಾನ ಮನಸ್ಕ ವಿರೋಧ ಪಕ್ಷಗಳ ಮುಖಂಡರ ಸಭೆಯನ್ನು ಜುಲೈ 17ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಸೋಮವಾರ ಹೇಳಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, ಹಲವು ವಿರೋಧ ಪಕ್ಷದ ನಾಯಕರ ಸಹಮತದೊಂದಿಗೆ ಸಭೆಯ ದಿನಾಂಕವನ್ನು ಮುಂದೂಡಲಾಗಿದೆ. ಅವರು ವೈಯಕ್ತಿಕವಾಗಿ ಅಥವಾ ಆನ್‌ಲೈನ್ ಸಭೆ ಮೂಲಕ ಅಥವಾ ವಾಟ್ಸಾಪ್ ಮೂಲಕ ಸಭೆ ಸೇರುತ್ತಾರೆ ಎಂದು ಅವರು ಹೇಳಿದರು.
ಇದನ್ನು ಓದಿ: ರಾಷ್ಟ್ರಪತಿ ಚುನಾವಣೆ: ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ ದ್ರೌಪದಿ ಮುರ್ಮು
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜೆಎಂಎಂ ಇನ್ನೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುವುದಾಗಿ ಎಎಪಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗೆ ಭರವಸೆ ನೀಡಿದೆ. ಜನತಾ ದಳ(ಎಸ್) ತನ್ನ ಸಂಸದೀಯ ಸಮಿತಿ ಸಭೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಈಗಾಗಲೇ ಘೋಷಿಸಿದೆ. ಅಷ್ಟಕ್ಕೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು-ಗೆಲುವು ಗೌಣ. ಇದು ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸೈದ್ಧಾಂತಿಕ ಹೋರಾಟವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಅಗತ್ಯ ಎಂದರು.
ಶ್ರೀಲಂಕಾದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ, ನೆರೆಯ ದೇಶ ಶ್ರೀಲಂಕಾದಲ್ಲಿನ ಬೆಳವಣಿಗೆಗಳು ದುರದೃಷ್ಟಕರ ಎಂದು ಹೇಳಿದ್ದಾರೆ.
ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಒಳ್ಳೆಯ ಆಡಳಿತ ಇದ್ದರೆ ನಮಗೆ ಸಂತೋಷ. ಭಾರತ ಸರ್ಕಾರವು ಹಲವು ದಶಕಗಳಿಂದ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಶ್ರೀಲಂಕಾದ ಆಂತರಿಕ ಬಿಕ್ಕಟ್ಟಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ನಮ್ಮ ದೇಶ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಎಂದು ಖರ್ಗೆ ಹೇಳಿದರು.