ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು 'ಉತ್ತರ ಕುಮಾರ'ನ ಖೆಡ್ಡಾ: ರಮೇಶ್ ಕುಮಾರ್ ಗೆ ಸುಧಾಕರ್ ಟಾಂಗ್!
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕೋಲಾರ ಕ್ಷೇತ್ರದಲ್ಲಿ ಉತ್ತರಕುಮಾರನ ತಂಡ ಖೆಡ್ಡಾ ತೋಡುತ್ತಿದೆ.
Published: 22nd July 2022 09:05 AM | Last Updated: 22nd July 2022 01:41 PM | A+A A-

ರಮೇಶ್ ಕುಮಾರ್ ಮತ್ತು ಕೆ. ಸುಧಾಕರ್
ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಕೋಲಾರ ಕ್ಷೇತ್ರದಲ್ಲಿ ಉತ್ತರಕುಮಾರನ ತಂಡ ಖೆಡ್ಡಾ ತೋಡುತ್ತಿದೆ. ಆ ಖೆಡ್ಡಾಕ್ಕೆ ಸಿದ್ದರಾಮಯ್ಯ ಬೀಳಬಾರದೆಂದು ಅವರ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಜೆಪಿಯ ಸಾಧನಾ ಸಮಾವೇಶದ ಪೂರ್ವಭಾವಿಯಾಗಿ ಗುರುವಾರ ಇಲ್ಲಿ ನಡೆದ ಕೋಲಾರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನಾನು ಸಿದ್ದರಾಮಯ್ಯ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.
ಉತ್ತರ ಕುಮಾರನಂಥ ನೂರು ಜನ ಹೋಗಿ ಆಹ್ವಾನಿಸಿದರೂ ಅವರು ಕೋಲಾರ ಕ್ಷೇತ್ರಕ್ಕೆ ಬರುವುದಿಲ್ಲ. ಆದರೆ, ಮಂತ್ರಿ ಆಗುವ ಮುನ್ನ ಸಿದ್ದರಾಮಯ್ಯ ವಿರುದ್ಧ ಈ ಉತ್ತರಕುಮಾರ ಏನೆಲ್ಲಾ ಮಾತನಾಡಿದ್ದರು ಎಂಬುದು ನನಗೆ ಗೊತ್ತು’ ಎಂದು ಅವರು ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಶ್ರೀನಿವಾಸಪುರದಲ್ಲಿ ಸೋಲಿನ ಆತಂಕ ಎದುರಾಗಿದೆ ಎಂಬ ವಿಚಾರ ಸ್ಪಷ್ಟವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಹೆಸರಿನಲ್ಲಿ ಗೆಲ್ಲಲು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಕ್ಷೇತ್ರದಲ್ಲಿ ಉತ್ತರಕುಮಾರನ ಸೋಲು ಖಚಿತ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ವರ್ತೂರು ಪ್ರಕಾಶ್ 2023ರ ಚುನಾವಣೆಯಲ್ಲಿ ಗೆದ್ದು ವಿಧಾನ ಸೌಧ ಪ್ರವೇಶ ಮಾಡುವುದು ಖಚಿತ ಎಂದು ತಾಮ್ರದ ತಟ್ಟೆಯಲ್ಲಿ ಬರೆದು ಇಟ್ಟುಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಕಳೆದಿದೆ. ದೊಡ್ಡಬಳ್ಳಾಪುರದಲ್ಲಿ ಇದೇ ತಿಂಗಳು ಸಾಧನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು.