ಡಿಕೆಶಿ ಸಿಎಂ ಆಗುವ ಮಹತ್ವಾಕಾಂಕ್ಷೆಯಲ್ಲಿ ತಪ್ಪೇನಿಲ್ಲ; ಶಾಸಕರು, ಹೈಕಮಾಂಡ್ ನಿರ್ಧರಿಸುತ್ತದೆ: ಸಿದ್ದರಾಮಯ್ಯ

ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನದ ಆಚರಣೆಯು ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿಸುತ್ತಿದೆ ಮತ್ತು ಅನೇಕರು ಇದನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಅವರ ಬೆಂಬಲಿಗರು ಮಾಡುತ್ತಿರುವ ಪ್ರಯತ್ನ ಅಂದುಕೊಂಡಿದ್ದಾರೆ.
ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ

ದಾವಣಗೆರೆಯಲ್ಲಿ ಆಗಸ್ಟ್ 3 ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನದ ಆಚರಣೆಯು ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿಸುತ್ತಿದೆ ಮತ್ತು ಅನೇಕರು ಇದನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಅವರ ಬೆಂಬಲಿಗರು ಮಾಡುತ್ತಿರುವ ಪ್ರಯತ್ನ ಅಂದುಕೊಂಡಿದ್ದಾರೆ. ಈ ಕುರಿತು ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ, ಇದು ನನ್ನನ್ನು ಮುಖ್ಯಮಂತ್ರಿ ಎಂದು ಬಿಂಬಿಸಲು ಅಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರು ಮತ್ತು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು. ಅವರ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

ನಿಮ್ಮ ಹುಟ್ಟುಹಬ್ಬದ ಆಚರಣೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಒಡಕು ಸೃಷ್ಟಿಸುತ್ತಿದೆ. ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಸಿದ್ದರಾಮಯ್ಯನವರಷ್ಟೇ ಅಲ್ಲ, ಈ ಹಿಂದೆ ಅನೇಕರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಮತ್ತು ಮುಂದೆಯೂ ಅನೇಕರು ಹಾಗೆ ಮಾಡುತ್ತಾರೆ. ನಾನು ಎಂದಿಗೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಮತ್ತು ಈಗ ನಾನು 75 ನೇ ವರ್ಷಕ್ಕೆ ಕಾಲಿಡುತ್ತಿರುವಾಗ ನನ್ನ ಹುಟ್ಟುಹಬ್ಬ ಆಚರಿಸಲು ಕೆಲವು ಸ್ನೇಹಿತರು ಮತ್ತು ಹಿತೈಷಿಗಳು  ಸಲಹೆ ನೀಡಿದರು. ನಾನು ಇಷ್ಟವಿಲ್ಲದೆ ಒಪ್ಪಿದೆ. ಅನೇಕ ಜನರು ಹುಟ್ಟುಹಬ್ಬದಲ್ಲಿ ಭಾಗಿಯಾಗುತ್ತಾರೆ. ಆದರೆ ಕೆಲವರು ಅದನ್ನು ವಿಭಿನ್ನವಾಗಿ ಅರ್ಥೈಸುತ್ತಾರೆ ಮತ್ತು ಅವರು ಹಾಗೆ ಮಾಡಲು ಸ್ವತಂತ್ರರು. ನಾವು ಅದನ್ನು ಹೇಗೆ ನೋಡುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.

ನಿಮ್ಮನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದೇ?

ಇಲ್ಲ, ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಅಲ್ಲ. ಹೊಸದಾಗಿ ಆಯ್ಕೆಯಾದ ಶಾಸಕರು ಮತ್ತು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತಾರೆ. ನಾವು ನಮ್ಮನ್ನು ಬಿಂಬಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮಾಡಬೇಕು. ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತಾರೆ, ನಂತರ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡುತ್ತದೆ. ಪಂಜಾಬ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ, ಪಕ್ಷವು ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿತ್ತು, ಆದರೆ ಸಾಮಾನ್ಯವಾಗಿ ಅದನ್ನು ಮಾಡಲಾಗುವುದಿಲ್ಲ. ಹಾಗಾಗಿ, ನನ್ನ 75ನೇ ಹುಟ್ಟುಹಬ್ಬ  ಮತ್ತು ನನ್ನ ರಾಜಕೀಯ ಪಯಣವನ್ನು ಸ್ಮರಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೂ ಮುಖ್ಯಮಂತ್ರಿ ಹುದ್ದೆಗೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ, ಇದು ಖಂಡಿತವಾಗಿಯೂ ರಾಜಕೀಯ ಸಂದೇಶವನ್ನು ಕಳುಹಿಸುತ್ತದೆ.

ಆ ರಾಜಕೀಯ ಸಂದೇಶವೇನು?

ರಾಜ್ಯದೆಲ್ಲೆಡೆಯಿಂದ ನಮ್ಮ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದು ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಗಟ್ಟಿ ಸಂದೇಶ ರವಾನಿಸಲಿದೆ. ಇದು ನಮ್ಮ ಪಕ್ಷದ ನಾಯಕರು ಸಂಘಟಿಸುವುದರಿಂದ ಪಕ್ಷವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ನಿಮ್ಮಂತಹ ಸಮಾಜವಾದಿ ನಾಯಕರಿಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಅಗತ್ಯವೇನಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪ್ರಶ್ನಿಸುತ್ತಿದ್ದಾರೆ.

ಅವರಿಂದ ನಾವು ಇನ್ನೇನು ನಿರೀಕ್ಷಿಸಬಹುದು? ಬಿಎಸ್ ಯಡಿಯೂರಪ್ಪ 77ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ಈಶ್ವರಪ್ಪ ಏನಾದರೂ ಹೇಳಿದ್ದಾರಾ? ಅವರು ನನ್ನ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? ಅವರಿಗೆ ನನ್ನ ಮೇಲೆ ಹೊಟ್ಟೆಕಿಚ್ಚು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಪಿಸಿಸಿ ಅಧ್ಯಕ್ಷರು ಸ್ವಾಭಾವಿಕವಾಗಿ ಆಯ್ಕೆಯಾಗುತ್ತಾರೆ ಎಂದು ಅವರು ಹೇಳಿದ್ದಾರೆ. ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಮುಖ್ಯಮಂತ್ರಿ ಆಗುವ ಆಸೆಯಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಶಾಸಕರು ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಪಿಸಿಸಿ ಅಧ್ಯಕ್ಷರೂ ಮುಖ್ಯಮಂತ್ರಿಯಾಗಿದ್ದಾರೆ, ಇನ್ನು ಕೆಲವರು ಸಿಎಂ ಆಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರೂ ಸಿಎಂ ಆಗಿದ್ದಾರೆ. ಎರಡೂ ರೀತಿಯ ಪೂರ್ವನಿದರ್ಶನಗಳಿವೆ.

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುವುದು ಅಥವಾ ಚುನಾವಣೆಗೆ ಮುನ್ನ ನಾಯಕನನ್ನು ಘೋಷಿಸುವುದು ಉತ್ತಮ ಎಂದು ನೀವು ಭಾವಿಸುತ್ತೀರಾ?

ಪಕ್ಷದ ಹೈಕಮಾಂಡ್ ನಿರ್ಧರಿಸುವುದರಿಂದ ನಾನು ಈ ಬಗ್ಗೆ ಏನನ್ನೂ ಹೇಳಲಾರೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ನಡೆಯುತ್ತಿರುವ ಚರ್ಚೆಗಳು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸುವುದರಿಂದ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುವುದಿಲ್ಲವೇ?

ಇದು ಬಿಜೆಪಿಗೆ ಹೇಗೆ ಸಹಾಯ ಮಾಡುತ್ತದೆ? ಬಸವರಾಜ ಬೊಮ್ಮಾಯಿ  ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಬಿಜೆಪಿ ಹೇಳಿದರೆ, ಅದು ಬಿಜೆಪಿಯ ಇತರ ಹಿರಿಯ ನಾಯಕರಲ್ಲಿ ಎದೆಯುರಿ ಉಂಟುಮಾಡುವುದಿಲ್ಲವೇ? ಅದನ್ನು ಒಪ್ಪಿಕೊಳ್ಳಲು ಯತ್ನಾಳ್ ಸಿದ್ಧರಿರುವರೇ? ಈ ಸಮಸ್ಯೆಗಳು (ಪಕ್ಷದಲ್ಲಿ) ಇರುತ್ತವೆ ಮತ್ತು ಅದು ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಪಕ್ಷದಲ್ಲಿ ಮಾಧ್ಯಮಗಳಲ್ಲಿ ಬಂದಿರುವಂತೆ ಗುಂಪುಗಾರಿಕೆ ಇಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಶಿವಕುಮಾರ್ ಮತ್ತು ನಾನು ಉತ್ತಮ ಸಂಬಂಧ ಹೊಂದಿದ್ದೇವೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಆಸೆ ಇದೆ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಖ್ಯಮಂತ್ರಿ ಆಗುವ ಆಸೆ ಇರಬಹುದು ಅದರಲ್ಲಿ ತಪ್ಪೇನಿಲ್ಲ. ಅವಕಾಶ ಸಿಕ್ಕರೆ ಶಾಸಕರು ಹೈಕಮಾಂಡ್ ಒಪ್ಪಿಗೆ ದೊರೆತರೆ ಸಿಎಂ ಆಗುತ್ತಾರೆ.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಬೆಂಬಲ ಪಕ್ಷಕ್ಕೆ ನಿರ್ಣಾಯಕ ಎಂದು ನೀವು ಭಾವಿಸುವುದಿಲ್ಲವೇ?

ಒಕ್ಕಲಿಗರು, ಬ್ರಾಹ್ಮಣರು, ಲಿಂಗಾಯತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳ ಮತದಾರರ ಬೆಂಬಲ ನಮಗೆ ಬೇಕು. ಎಲ್ಲ ಸಮುದಾಯಗಳ ಬೆಂಬಲ ಸಿಕ್ಕರೆ ಮಾತ್ರ ಗೆಲ್ಲಲು ಸಾಧ್ಯ, ಇಲ್ಲದಿದ್ದರೆ ಸಾಧ್ಯವಿಲ್ಲ. ಕೇವಲ ಒಂದು ಸಮುದಾಯದ ಬೆಂಬಲದಿಂದ ಯಾರೂ ಗೆಲ್ಲಲು ಸಾಧ್ಯವಿಲ್ಲ.

2023 ರ ಚುನಾವಣೆಯಲ್ಲಿ ಸ್ಪರ್ಧಿಸಲು ನೀವು ಕ್ಷೇತ್ರವನ್ನು ನಿರ್ಧರಿಸಿದ್ದೀರಾ?

ನಾನು ಇನ್ನೂ ನಿರ್ಧರಿಸಿಲ್ಲ. ನಾನು ಬಾದಾಮಿ ವಿಧಾನಸಭಾ ಕ್ಷೇತ್ರದ ಹಾಲಿ ಸದಸ್ಯನಾಗಿದ್ದು, ಅದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಕೋಲಾರ, ಕೊಪ್ಪಳ, ಚಾಮರಾಜನಗರ, ಹುಣಸೂರು, ವರುಣಾ ಸೇರಿದಂತೆ ಇತರೆಡೆಯಿಂದಲೂ ಒತ್ತಡವಿದೆ.

2023 ರ ಚುನಾವಣೆಯ ಪ್ರಮುಖ ವಿಷಯಗಳೇನು?

ಬಿಜೆಪಿಯ ಕೋಮು ರಾಜಕಾರಣ, ಭ್ರಷ್ಟಾಚಾರ ಮತ್ತು ನಿಷ್ಪರಿಣಾಮಕಾರಿ ಆಡಳಿತ ಪ್ರಮುಖ ವಿಷಯಗಳಾಗಿವೆ. ಆರ್ಥಿಕತೆ ಅಧೋಗತಿಯಲ್ಲಿದೆ. ಮಾರ್ಚ್ 2018 ರಲ್ಲಿ ರಾಜ್ಯವು 2,47,000 ಕೋಟಿ ರೂಪಾಯಿ ಸಾಲವನ್ನು ಹೊಂದಿತ್ತು ಮತ್ತು ಈಗ 5,40,000 ಕೋಟಿ ರೂಪಾಯಿಗಳಿಗೆ ತಲುಪಿದೆ, ಅಂದರೆ ನಾಲ್ಕು ವರ್ಷಗಳಲ್ಲಿ ಸುಮಾರು 3 ಲಕ್ಷ ಕೋಟಿ ರೂಪಾಯಿ ಸಾಲವಾಗಿದೆ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಕಂದಾಯ ಹೆಚ್ಚಾಗಿದ್ದ ರಾಜ್ಯವಾಗಿದ್ದ ನಮ್ಮದು ಈಗ ಕಂದಾಯ ಕೊರತೆಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅವರು ನೀಡಿದ್ದ ಭರವಸೆಯ ಶೇ 20ರಷ್ಟನ್ನು ಸಹ ಅನುಷ್ಠಾನಗೊಳಿಸಿಲ್ಲ. 40ರಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ.

ಹಿಂದೆ ಭ್ರಷ್ಟಾಚಾರ ಇರಲಿಲ್ಲವೇ?

ಹಿಂದೆ ಭ್ರಷ್ಟಾಚಾರ ಇರಲಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಅದು ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಈ ಹಿಂದೆ ಶೇ.40ರಷ್ಟು ಭ್ರಷ್ಟಾಚಾರ ಆಗಿತ್ತೇ? ಗುತ್ತಿಗೆದಾರರ ಸಂಘ ಈ ಹಿಂದೆ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ ಬರೆದಿತ್ತು.

ಪ್ರತಿಪಕ್ಷದ ನಾಯಕರಾಗಿ ಬಸವರಾಜ ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿಯನ್ನು ಹೇಗೆ ನೋಡುತ್ತೀರಿ?

ನಾನು ಹೇಳಿದ ಇವೆಲ್ಲವೂ ಬೊಮ್ಮಾಯಿಯವರ ಕಾಲದಲ್ಲಿಯೇ ನಡೆದವು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣವೂ ಅವರ ಅವಧಿಯಲ್ಲಿಯೇ ನಡೆದಿದೆ. ಸುಮಾರು 300 ಅಭ್ಯರ್ಥಿಗಳಿಂದ 80 ಲಕ್ಷ ರೂ. ಲಂಚ ಪಡೆದು ಉತ್ತರ ಪತ್ರಿಕೆಗಳನ್ನು ತಿದ್ದಲಾಗಿದೆ.

ಕಾಂಗ್ರೆಸ್ ಮಿಷನ್ 150 ಬಗ್ಗೆ ಮಾತನಾಡುತ್ತಿದೆ, ಆದರೆ 2023 ರ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ಷಮತೆಯ ಬಗ್ಗೆ ನಿಮ್ಮ ವಾಸ್ತವಿಕ ಮೌಲ್ಯಮಾಪನವೇನು?

ನಾವು 130 ರಿಂದ 150 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ನಾವು 150 ಸೀಟುಗಳನ್ನು ಗುರಿಯಾಗಿಸಿಕೊಂಡಿದ್ದೇವೆ, ಆದರೆ ನಾವು ಕನಿಷ್ಠ 130 ಅನ್ನು ಪಡೆಯುತ್ತೇವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com