'ಆರೆಸ್ಸೆಸ್ ಮೇಲೆ ಬುಲ್ಡೋಜರ್ ನುಗ್ಗಿಸಿ' ಎಂದು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಆರೆಸ್ಸೆಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕೆಂದು ಹೇಳಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ರೀತಿಯಾಗಿ ನಾನು ಹೇಳೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಆರೆಸ್ಸೆಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕೆಂದು ಹೇಳಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ರೀತಿಯಾಗಿ ನಾನು ಹೇಳೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಸ್ಪಷ್ಟಪಡಿಸದ್ದಾರೆ.

“ಶ್ರೀರಾಮಸೇನೆ, ಬಜರಂಗದಳ, ಆರ್‌ಎಸ್‌ಎಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂದು ನಾನು ಕರೆಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿಯನ್ನು ಬಹಳಷ್ಟು ಬಿಜೆಪಿ ಬೆಂಬಲಿಗರು ಹಂಚಿಕೊಂಡು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ” ಎಂದು ಪ್ರತಿಪಕ್ಷ ನಾಯಕ ತಿಳಿಸಿದ್ದಾರೆ.

“ವಿರೋಧ ಪಕ್ಷದವರು, ಅಲ್ಪಸಂಖ್ಯಾತರು, ಸೈದ್ದಾಂತಿಕ ವಿರೋಧಿಗಳ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂಬ ಹಿಂಸಾತ್ಮಕ ಹೇಳಿಕೆಗಳೇ ತಪ್ಪು. ಇಂತಹ ಹೇಳಿಕೆಗಳಿಂದ ಪ್ರಚೋದನೆಗೀಡಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಬಜರಂಗದಳದವರ ಮನೆ ಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಯಾರೂ ಅವಕಾಶ ನೀಡಬಾರದು” ಎಂದಷ್ಟೇ ನಾನು ಹೇಳಿದ್ದು ಎಂದಿದ್ದಾರೆ.

ಇದನ್ನು ತಿರುಚಿ ಪ್ರಕಟವಾದ ವರದಿಯನ್ನು ಇನ್ನಷ್ಟು ತಿರುಚಿ ಕೆಲವು ಸಮಾಜವಿರೋಧಿ ಶಕ್ತಿಗಳು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಪ್ರಚೋದನಕಾರಿ ಮತ್ತು ಕಾನೂನು ಬಾಹಿರ ನಡೆ-ನುಡಿಗಳನ್ನು ನಿಲ್ಲಿಸದೆ ಹೋದರೆ ಅಂತಹವರ ವಿರುದ್ದ ಕಾನೂನುಕ್ರಮಕ್ಕಾಗಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಫೇಸ್ ಬುಕ್ ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇನ್ನು ದಕ್ಷಿಣ ಕನ್ನಡದ ಭಜರಂಗದಳದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸಿದ್ದರಾಮಯ್ಯ ಅವರು ಖಂಡಿಸಿದ್ದು, ಪೊಲೀಸರು ಕೂಡಲೇ ಹಂತಕರನ್ನು ಬಂಧಿಸಬೇಕು ಮತ್ತು ಆ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಬೇಕು. ಪೊಲೀಸರು ಯಾವುದೇ ಪಕ್ಷಪಾತ ಮಾಡದೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com