ಡಿಕೆ ಶಿವಕುಮಾರ್ ಜೊತೆ ಅಸಮಾಧಾನ: ಕಾಂಗ್ರೆಸ್ ತೊರೆಯಲು ಎಂಆರ್ ಸೀತಾರಾಮ್ ನಿರ್ಧಾರ; ಇಂದು ಬೆಂಬಲಿಗರ ಸಭೆ

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿರುವ ತಮ್ಮ ವಿರುದ್ಧ ಪಕ್ಷದ ವರಿಷ್ಠರ ಮಟ್ಟದಲ್ಲಿ ರಾಜಕೀಯ ಪಿತೂರಿ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಎಂ.ಆರ್. ಸೀತಾರಾಂ ಬಹಿರಂಗ ಬಂಡಾಯ ಸಾರಿದ್ದಾರೆ.
ಎಂ ಆರ್ ಸೀತಾರಾಮ್
ಎಂ ಆರ್ ಸೀತಾರಾಮ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿರುವ ತಮ್ಮ ವಿರುದ್ಧ ಪಕ್ಷದ ವರಿಷ್ಠರ ಮಟ್ಟದಲ್ಲಿ ರಾಜಕೀಯ ಪಿತೂರಿ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಎಂ.ಆರ್. ಸೀತಾರಾಂ ಬಹಿರಂಗ ಬಂಡಾಯ ಸಾರಿದ್ದಾರೆ.

ಬೆಂಬಲಿಗರಿಗೆ ಈ ಕುರಿತು ಪತ್ರ ಬರೆದಿರುವ ಅವರು, ಇತ್ತೀಚೆಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಹಾಗೂ ತಾವು ಪಕ್ಷ ನಿಷ್ಠನಾಗಿ ಮಾಡಿರುವ ಸೇವೆ, ನಿರ್ವಹಿಸಿರುವ ಹುದ್ದೆಗಳ ಬಗ್ಗೆಯೂ ಸವಿವರವಾಗಿ ಬಹಿರಂಗವಾಗಿಯೇ ತಿಳಿಸಿದ್ದಾರೆ. 1999 ಹಾಗೂ 2004ರಲ್ಲಿ ಮಲ್ಲೇಶ್ವರದಿಂದ ಗೆದ್ದಿದ್ದ ತಾನು 2008ರಲ್ಲಿ ಪಕ್ಷದ ಕೆಲವರ ವಿಶ್ವಾಸದ್ರೋಹ ಹಾಗೂ  ಒಳಸಂಚಿನಿಂದ ಸೋತಿದ್ದೆ.

2009ರಲ್ಲಿ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾದರೂ ಟಿಕೆಟ್‌ ನಿರಾಕರಿಸಲಾಯಿತು. ಅನಂತರ 2012ರಲ್ಲಿ ಪರಿಷತ್‌ಗೆ ಆಯ್ಕೆಯಾದ 2018ರಲ್ಲಿ ನನ್ನೊಂದಿಗೆ ಆಯ್ಕೆಯಾದವರಿಗೆ ಮತ್ತೂಂದು ಅವಕಾಶ ಕೊಟ್ಟರೂ ನನಗೆ ನಿರಾಕರಿಸಲಾಯಿತು. ಇತ್ತೀಚೆಗೆ ಸಹ ರಾಜ್ಯ ನಾಯಕರು ನನ್ನ ಹೆಸರು ಪರಿಷತ್‌ಗೆ ಶಿಫಾರಸು ಮಾಡಿದರೂ ರಾತೋ ರಾತ್ರಿ ಪಿತೂರಿ ನಡೆಸಿ ಅವಕಾಶ ನಿರಾಕರಿಸಲಾಯಿತು ಎಂಬುದು ಸೀತಾರಾಮ್ ಆರೋಪ.

ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಗಾರ್ಡೇನಿಯಾದಲ್ಲಿ ಶುಕ್ರವಾರ ತಮ್ಮ ಬೆಂಬಲಿಗರ ಸಭೆ ಕರೆದಿರುವ ಎಂ.ಆರ್. ಸೀತಾರಾಂ, ಪಕ್ಷದಲ್ಲಿ ತಮಗಾಗಿರುವ ಅನ್ಯಾಯದ ವಿರುದ್ಧ ಬಂಡಾಯದ ಬಾವುಟ ಹಾರಿಸಲಿದ್ದಾರೆ.

ಮಾಜಿ ಎಂಎಲ್ಸಿಗಳಾದ ರಮೇಶ್ ಬಾಬು, ಎಂಡಿ ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ತಮ್ಮ ಬೆಂಬಲಿಗರಿಂದ ಪ್ರತಿಕ್ರಿಯೆ ಪಡೆದ ನಂತರ, ಸೀತಾರಾಮ್ ಅವರು ಕಾಂಗ್ರೆಸ್‌ನಲ್ಲಿ ಉಳಿಯಬೇಕೇ ಅಥವಾ ತೊರೆಯಬೇಕೇ ಎಂಬ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಸೀತಾರಾಂ ಅವರನ್ನು ಕಣಕ್ಕಿಳಿಸಿ ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಸೀತಾರಾಮ್ ಅವರು ಬಲಿಜ ಸಮುದಾಯದವರಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯದ ಮತದಾರರಿದ್ದಾರೆ.

ಮೂಲಗಳ ಪ್ರಕಾರ ಹಾಲಿ ಲೋಕಸಭಾ ಸದಸ್ಯ ಬಿಎನ್ ಬಚ್ಚೇಗೌಡ ಬಿಜೆಪಿ ತೊರೆಯುವ ಸಾಧ್ಯತೆ ಇದೆ. ಸೀತಾರಾಮ್ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ, ಕಾಂಗ್ರೆಸ್ ಸೀತಾರಾಮ್ ಪುತ್ರ ರಕ್ಷಾ ರಾಮಯ್ಯಅವರನ್ನು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ  ಅಸಮಾಧಾನ ಸರಿಪಡಿಸಲು ಪ್ರಯತ್ನಿಸಿತು. ಆದರೆ ಎಂಎಲ್ ಸಿ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸೀತಾರಾಮ್ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com